ಬೆಂಗಳೂರು: ರಸ್ತೆಗುಂಡಿ ಸಮಸ್ಯೆಗಳಿಂದ ಸದಾ ಸುದ್ದಿಯಲ್ಲಿರುವ ಬೆಂಗಳೂರನ್ನ ವಿದೇಶಿ ಪ್ರಜೆಯೊಬ್ಬರು ಹೈದರಬಾದ್ ಜೊತೆಗೆ ಹೋಲಿಸಿ ಟ್ರೋಲ್ ಮಾಡಿದ್ದಾರೆ, ಬೆಂಗಳೂರಿನ ರಸ್ತೆಗಳು ಹೈದರಾಬಾದ್ ರಸ್ತೆಗಳಂತೆ ಯಾಕಿಲ್ಲ ಎಂದು ಪ್ರಶ್ನಿಸಿ ವಿಡಿಯೋ ಹಂಚಿಕೊಂಡಿದ್ದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳು ದುರಾವಸ್ಥೆ ವಿಚಾರಕ್ಕೆ ಮೇಲಿಂದ ಮೇಲೆ ಸುದ್ದಿಯಾಗುತ್ತಲೇ ಇರುತ್ತವೆ. ಉದ್ಯಮಿ ಅಶೋಕ್ ಪೈ, ಕಿರಣ್ ಮಜುಂದಾರ್ ಸೇರಿದಂತೆ ಹಲವು ಉದ್ಯಮಿಗಳು ಈ ಕುರಿತು ಧ್ವನಿ ಎತ್ತಿದ್ದು. ಇಲ್ಲಿಯವರೆಗೂ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಅಷ್ಟೇನೂ ಸುಧಾರಿಸಿಲ್ಲ. ಇದರ ನಡುವೆ ಕೆನಡಾದ ಪ್ರಜೆಯೊಬ್ಬರು ಹೈದರಾಬಾದ್ ನಗರದಲ್ಲಿನ ರಸ್ತೆಗಳನ್ನು ಹೊಗಳಿ, ಅದನ್ನು ಬೆಂಗಳೂರಿನೊಂದಿಗೆ ಹೋಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೈದರಾಬಾದ್‌ನ ರಸ್ತೆಗಳು ಎಷ್ಟು ಸುಗಮ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿವೆ. ಆದರೆ ಬೆಂಗಳೂರಿನ ರೋಡ್ಗಳು ಯಾಕೆ ಹೀಗಿಲ್ಲ ಎಂದು ಪ್ರಶ್ನಿಸಿ ಕ್ಯಾಲೆಬ್ ಫ್ರೀಸೆನ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಕ್ಯಾಲೆಬ್ ಫ್ರೀಸೆನ್ "ಬೆಂಗಳೂರಿಗೆ ಹೋಲಿಸಿದರೆ ಹೈದರಾಬಾದ್‌ನಲ್ಲಿ ರಸ್ತೆಗಳು ಅದ್ಭುತವಾಗಿದೆ. ಬೆಂಗಳೂರಿನಲ್ಲಿ ಯಾಕೆ ಇಂತಹ ರಸ್ತೆಗಳು ಇರಲಾರವು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾವು ಈಗ ನಗರದ ಮಧ್ಯದಲ್ಲಿದ್ದೇವೆ. ಎಲ್ಲೆಡೆ ಉತ್ತಮ ರಸ್ತೆಗಳಿವೆ. ವಿವಿಧ ಪ್ರದೇಶಗಳನ್ನು ಸಂಪರ್ಕಿಸಿ ಸಂಚಾರ ಸುಲಭಗೊಳಿಸುತ್ತಿವೆ. ರಸ್ತೆಗಳು ತುಂಬಾ ಚೆನ್ನಾಗಿ ನಿರ್ಮಾಣಗೊಂಡಿವೆ. ಪಾದಚಾರಿಗಳು ಹಠಾತ್ ವಾಹನದ ಮುಂದೆ ಬರುವುದಿಲ್ಲ, ಪ್ರಾಣಿಗಳಿಲ್ಲ, ಗುಂಡಿಗಳಿಲ್ಲ. ರಸ್ತೆಗಳು ಪರಿಪೂರ್ಣ ಸ್ಥಿತಿಯಲ್ಲಿವೆ. ಬೆಂಗಳೂರಿನಲ್ಲಿ ಯಾಕೆ ಹೀಗಿಲ್ಲ? ಎಂದು ಅವರು ಪ್ರಶ್ನಿಸಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.
ನನ್ನ ಗಮನಕ್ಕೆ ಬಂದಂತೆ ಬೆಂಗಳೂರಲ್ಲಿ ಇರುವ ರೀತೀ ಭಾರೀ ಟ್ರಾಫಿಕ್ ಸಮಸ್ಯೆ ಇಲ್ಲಿ ಕಡಿಮೆ. ಟ್ರಾಫಿಕ್ ಇಲ್ಲ ಎಂದಲ್ಲ, ಆದರೆ ಉತ್ತಮ ರಸ್ತೆ ನಿರ್ಮಾಣದ ಮೂಲಕ ಸಮಸ್ಯೆಯನ್ನು ನಿಯಂತ್ರಿಸಲು ನಗರ ಆಡಳಿತ ಯಶಸ್ವಿಯಾಗಿದೆ. ಹೈದರಾಬಾದ್‌ನಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಸಾಮಾನ್ಯವಾಗಿ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದವರು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಹೈದರಾಬಾದ್ vs ಬೆಂಗಳೂರು ಎಂಬ ಹೊಸ ಚರ್ಚೆ ಶುರುವಾಗಿದೆ.