ನವದೆಹಲಿ: ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಘಟನೆಯ ನಡುವೆಯೂ ಧೈರ್ಯ ಹಾಗೂ ಸಮಯಪ್ರಜ್ಞೆ ಪ್ರದರ್ಶಿಸಿ 180 ಪ್ರಯಾಣಿಕರ ಜೀವ ರಕ್ಷಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಮ್ಯಾನ್ಕೈಂಡ್ ಫಾರ್ಮಾ ಕಂಪನಿ ₹1 ಕೋಟಿ ಬಹುಮಾನ ಘೋಷಿಸಿದೆ.
ದುಬೈ-ಟೆಲ್ ಅವಿವ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್ನಿಂದ ಚಾಕು ಇರಿತಕ್ಕೊಳಗಾದರೂ, ಸ್ಮಿತ್ ಮಚ್ಚಾರ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ಸಾಹಸ ಮತ್ತು ಪ್ರಯಾಣಿಕರ ಸುರಕ್ಷತೆಗೆ ನೀಡಿದ ಆದ್ಯತೆಗೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮ್ಯಾನ್ಕೈಂಡ್ ಫಾರ್ಮಾ ಸಂಸ್ಥೆ ಕೃತಜ್ಞತೆಯ ಸಂಕೇತವಾಗಿ ₹1 ಕೋಟಿ ನೀಡಲು ನಿರ್ಧರಿಸಿದೆ. ಸಂಸ್ಥೆಯ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಜುನೇಜಾ ಅವರು ಮಚ್ಚಾರ್ ಅವರಿಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯನಾಗಿ ಅವರ ಧೈರ್ಯ, ಮಾನವೀಯತೆ ಮತ್ತು ಕರ್ತವ್ಯನಿಷ್ಠೆಯನ್ನು ಕಂಡು ಹೆಮ್ಮೆಪಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
‘ನೀವು ರಕ್ಷಿಸಿದ ಜೀವಗಳ ಮೌಲ್ಯವನ್ನು ಯಾವುದೇ ಹಣದ ಮೊತ್ತದಿಂದ ಅಳೆಯಲು ಸಾಧ್ಯವಿಲ್ಲ. ಲಕ್ಷಾಂತರ ಜನರಿಗೆ ನೀವು ನೀಡಿದ ಸ್ಫೂರ್ತಿಗೂ ಬೆಲೆ ಕಟ್ಟಲಾಗದು. ನಿಮ್ಮ ಧೈರ್ಯ ಮತ್ತು ಮಾನವೀಯತೆಯ ಮೇಲಿನ ಗೌರವ ಹಾಗೂ ಕೃತಜ್ಞತೆಯ ಸಣ್ಣ ಅಭಿವ್ಯಕ್ತಿಯೇ ಈ ಕೊಡುಗೆ’ ಎಂದು ಜುನೇಜಾ ಪತ್ರದಲ್ಲಿ ಹೇಳಿದ್ದಾರೆ. ಇತರರ ಜೀವಕ್ಕೆ ಆದ್ಯತೆ ನೀಡಿ ಭಾರತಕ್ಕೆ ಹೆಮ್ಮೆ ತಂದಿದ್ದಕ್ಕಾಗಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಧನ್ಯವಾದ ಸಲ್ಲಿಸಿರುವ ಜುನೇಜಾ, ‘ಕ್ಯಾಪ್ಟನ್ ಸ್ಮಿತ್, ಒಬ್ಬ ಭಾರತೀಯನಾಗಿ ನಾವು ನಿಮಗೆ ನಮಸ್ಕರಿಸುತ್ತೇವೆ. ನೀವು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ’ ಎಂದು ಶ್ಲಾಘಿಸಿದ್ದಾರೆ.