ಗಾಂಧಿನಗರ: ಕಳೆದ ವರ್ಷ ಜೂನ್ 12ರಂದು ಅಹಮದಾಬಾದ್ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ(Air India) ದುರಂತಕ್ಕೆ ಒಂದು ವರ್ಷ ತುಂಬಿದೆ. ಈ ದುರಂತದಲ್ಲಿ ಸಾವನ್ನಪ್ಪಿದವರ ನೆನಪಿನಲ್ಲಿ ಗುಜರಾತ್ ಸರ್ಕಾರ ಮಾನವೀಯ ನಿರ್ಧಾರವೊಂದನ್ನ ಪ್ರಕಟಿಸಿದ್ದು. ದುರಂತ ನಡೆದ ಸ್ಥಳದಲ್ಲಿ ಈಗ ಭವಿಷ್ಯದ ವೈದ್ಯರನ್ನು ರೂಪಿಸುವ, ಜೀವ ಉಳಿಸುವ ಪವಿತ್ರ ಶೈಕ್ಷಣಿಕ ಕೇಂದ್ರವನ್ನಾಗಿ ಮರು ಅಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ.
ಕಳೆದ ವರ್ಷ ಇದೇ ದಿನ ದೇಶ ಎಂದು ಮರೆಯದ ದುರಂತವೊಂದು ಸಂಭವಿಸಿತ್ತು, ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ, ಟೇಕ್ಆಫ್ ಆದ ಕೆಲವೇ ಸೆಕೆಂಡ್ಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ಅಪ್ಪಳಿಸಿತ್ತು. ನೋಡ ನೋಡ್ತಿದ್ದಂತೆ ವಿಮಾನದಲ್ಲಿದ್ದ 260 ಜನ ಪ್ರಾಣ ತೆತ್ತಿದ್ದರು. ಇದೀಗ ಈ ದುರಂತದ 1ನೇ ವರ್ಷದ ನೆನಪಿನಲ್ಲಿ ಗುಜರಾತ್ ಸರ್ಕಾರ
ಬಿಜೆ ವೈದ್ಯಕೀಯ ಕಾಲೇಜಿನ ಹಳೆಯ ಹಾಸ್ಟೆಲ್ನ ಶಿಥಿಲಗೊಂದ ಸಂಕೀರ್ಣವನ್ನ ಕೆಡವಿ ಹೊಸ ಆಧುನಿಕ ಹಾಸ್ಟೆಲ್ ಸಂಕೀರ್ಣವನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಸಭೆಯ ವಿವರಗಳನ್ನು ಹಂಚಿಕೊಂಡ ರಾಜ್ಯ ಆರೋಗ್ಯ ಸಚಿವ ಪ್ರಫುಲ್ ಪನ್ಶೇರಿಯಾ, ಆ ಸ್ಥಳದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರಿಸುವುದು ಅತ್ಯಂತ ಅರ್ಥಪೂರ್ಣ ಮತ್ತು ಪವಿತ್ರ ಕೆಲಸವಾಗಿದೆ. ಭವಿಷ್ಯದಲ್ಲಿ ಇಲ್ಲಿ ಸಾವಿರಾರು ವೈದ್ಯರು ವಿದ್ಯಾಭ್ಯಾಸ ಮಾಡಿ ರೋಗಿಗಳ ಸೇವೆ ಸಲ್ಲಿಸಲಿದ್ದಾರೆ. ಅಗಲಿದ ಆತ್ಮಗಳಿಗೆ ಇದಕ್ಕಿಂತ ಉತ್ತಮ ಗೌರವ ಬೇರೊಂದಿಲ್ಲ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ದುರಂತದಲ್ಲಿ ಅಗಲಿದ ಆತ್ಮಗಳ ಚಿರಶಾಂತಿಗಾಗಿ ವಿಶೇಷ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿದೆ. ಒಂದು ಕಡೆ ಅಪಘಾತದ ತನಿಖೆ ಮತ್ತು ಪರಿಹಾರ ಪ್ರಕ್ರಿಯೆಗಳು ನಡೆಯುತ್ತಿದ್ದರೂ, ಮತ್ತೊಂದೆಡೆ ದುರಂತ ಸಂಭವಿಸಿದ ಜಾಗದಲ್ಲೇ ನೂರಾರು ಜೀವಗಳನ್ನು ಉಳಿಸುವ ವೈದ್ಯರ ವಸತಿ ನಿಲಯ ತಲೆಯೆತ್ತುತ್ತಿರುವುದು ಜಗತ್ತಿಗೆ ಮಾನವೀಯತೆಯ ವಿಶಿಷ್ಟ ಸಂದೇಶವನ್ನು ಸಾರುತ್ತಿದೆ.