Search


ನೇಪಾಳ ಪ್ರವಾಹದಲ್ಲಿ 288 ಭಾರತೀಯರು ನಾಪತ್ತೆ; ರಾಜ್ಯವಾರು ಮಾಹಿತಿ ಹಂಚಿಕೊಂಡ ವಿದೇಶಾಂಗ ಇಲಾಖೆ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ 288 ಭಾರತೀಯ ಪ್ರಜೆಗಳು ಇನ್ನೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ನಾಪತ್ತೆಯಾದವರಲ್ಲಿ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 73 ಮಂದಿ ಹಾಗೂ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಹಲವರು ಸೇರಿದ್ದಾರೆ. 

ವಿದೇಶಾಂಗ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ನಾಪತ್ತೆಯಾದವರಲ್ಲಿ  49 ಮಂದಿ ತಮಿಳುನಾಡಿನವರು, 32 ಮಂದಿ ಪಶ್ಚಿಮ ಬಂಗಾಳದವರು, 33 ಮಂದಿ ಕೇರಳದವರು ಹಾಗೂ ವಿವಿಧ ರಾಜ್ಯಗಳ 61 ಮಂದಿ ಸೇರಿದ್ದಾರೆ. 73 ಮಂದಿ ತ್ರಿಶೂಲಿ-1 ವಿದ್ಯುತ್ ಯೋಜನೆಯ ಕಾರ್ಮಿಕರಾಗಿದ್ದಾರೆ.  ಇದೇ ವೇಳೆ, ಪ್ರವಾಹ ಪೀಡಿತ ಪ್ರದೇಶಗಳಿಂದ ತಮಿಳುನಾಡಿನ 21 ಭಾರತೀಯರನ್ನು ರಕ್ಷಿಸಲಾಗಿದೆ. ಮತ್ತೊಂದೆಡೆ, ಟಿಬೆಟ್‌ನ ಚೀನಾ ಭಾಗದಲ್ಲಿ ಸುಮಾರು 200 ಭಾರತೀಯರು ಸಿಲುಕಿರುವ ಮಾಹಿತಿ ದೊರೆತಿದ್ದು, ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸುತ್ತಿದೆ. 

ಪ್ರವಾಹದ ಹಿನ್ನೆಲೆಯಲ್ಲಿ MEA 24x7 ಕಂಟ್ರೋಲ್ ರೂಮ್ ಸ್ಥಾಪಿಸಿದ್ದು, ಭಾರತೀಯರ ಕುಟುಂಬಸ್ಥರಿಗೆ ಮಾಹಿತಿ ಹಾಗೂ ನೆರವು ಒದಗಿಸುವ ಕಾರ್ಯ ನಡೆಯುತ್ತಿದೆ. ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಿರುವುದರಿಂದ ನಾಪತ್ತೆಯಾದವರ ಸಂಖ್ಯೆಯಲ್ಲೂ ಬದಲಾವಣೆ ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಕರ್ನಾಟಕಕ್ಕೂ ಆತಂಕ: ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಸಂಗ್ರಹಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕಲಬುರಗಿಯ ಇಬ್ಬರು ಸುರಕ್ಷಿತವಾಗಿರುವುದು ದೃಢಪಟ್ಟಿದ್ದು, ಬೆಂಗಳೂರಿನ ಮೂಲದ ನಾಲ್ವರು ಮಾನಸ ಸರೋವರ ಯಾತ್ರಿಕರ ಸಂಪರ್ಕ ಇನ್ನೂ ಸಿಗದಿರುವ ಬಗ್ಗೆ ವರದಿಯಾಗಿದೆ.

By Ravikumar - 27-08-2026


Ads in Post