ಮುಂಬೈ: ಐಪೋನ್ಗಾಗಿ ಒಂದು ಕುಟುಂಬವೇ ಸರ್ವನಾಶವಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 18 ವರ್ಷದ ಕುನಾಲ್ ಚಂದ್ವಾಡೆ ಎಂಬ ಯುವಕ ಐಪೋನ್ ಖರೀದಿಸಿದ್ದ, ಅದರ ಮಾಸಿಕ ಕಂತು ಕಟ್ಟಲು ಪೋಷಕರ ಬಳಿ ಹಣ ಕೇಳಿದ್ದ, ಆದರೆ ಅದಕ್ಕೆ ಪೋಷಕರು ನಿರಾಕರಿಸಿದ್ದಕ್ಕೆ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದ, ಮಗ ಬೆಟ್ಟದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದನ್ನ ತಪ್ಪಿಸಲು ಆತನ ಪೋಷಕರು ಸ್ಥಳಕ್ಕೆ ಆಗಮಿಸಿದ್ದರು, ಮಗನ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದರು, ಆದರೆ ಮಗ ಯಾರ ಮಾತನ್ನು ಕೇಳಲಿಲ್ಲ, ಹೇಗಾದರು ಮಗನನ್ನು ಉಳಿಸಿಕೊಳ್ಳಲು ಆತನ ತಂದೆ ಬೆಟ್ಟದ ತುದಿಗೆ ತೆರಳಿ ಮಗನ ಕೈ ಹಿಡಿದು ಎಳೆಯಲು ಪ್ರಯತ್ನಿಸುವ ವೇಳೆ ಆಯಾತಪ್ಪಿ ಇಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ, ಇದರ ಬೆನ್ನಲ್ಲೇ ಗಂಡ, ಮಗನನ್ನು ಕಳೆದುಕೊಂಡ ಆತನ ತಾಯಿಯು ಬೆಟ್ಟದಿಂದ ಜಿಗಿದು ಸಾವನ್ನಪ್ಪಿದ್ದಾರೆ.
ಹೌದು..ಮೇಲಿನ ಪ್ಯಾರದಲ್ಲಿರುವ ಘಟನೆ ಅಕ್ಷರಶಃ ಸತ್ಯ..ಹೊಸ ಐಫೋನ್ ಖರೀದಿಸಿದ್ದ ಕುನಾಲ್, ಅದರ ಮಾಸಿಕ ಕಂತು ಕಟ್ಟಲು ಹಣ ಕೇಳಿ ಪೋಷಕರೊಂದಿಗೆ ವಾಗ್ವಾದ ನಡೆಸಿದ್ದ. ಬಳಿಕ ಕೋಪದಿಂದ ಬೆಳಗ್ಗೆ 10 ಗಂಟೆಗೆ ಸಮೀಪದ ಕೊಹ್ಡ್ಯಾ ಬೆಟ್ಟವೇರಿ ಆತ್ಮಹತ್ಯೆಯ ಬೆದರಿಕೆ ಹಾಕಿದ್ದ. ಮಗನನ್ನು ಉಳಿಸಿಕೊಳ್ಳಲು ಬೆಟ್ಟಕ್ಕೆ ಓಡಿಹೋದ ತಾಯಿ ಸಂಗೀತಾ, ನೆಲದ ಮೇಲೆ ಕುಳಿತು ಕಣ್ಣೀರಿಡುತ್ತಾ ಕೈಮುಗಿದು, ಮಗನ ಕಾಲಿಗೆ ಬಿದ್ದು ಮನೆಗೆ ಬರುವಂತೆ ಗೋಗರೆದಿದ್ದಾರೆ. ಆದರೆ, “ಅಮ್ಮಾ, ನನ್ನ ಮಾತು ಯಾರೂ ಕೇಳುವುದಿಲ್ಲ. ನಾನು ಬದುಕುವುದರಲ್ಲಿ ಅರ್ಥವಿಲ್ಲ” ಎಂದು ಕುನಾಲ್ ಹತಾಶೆಯಿಂದ ಉತ್ತರಿಸಿದ್ದಾನೆ.
ಈ ವೇಳೆ ಆತನ ತಂದೆ ಮುರುಳೀಧರ್ ಮಗನನ್ನು ಹೇಗಾದರು ಉಳಿಸಬೇಕು ಎಂದು ಬೆಟ್ಟದ ಅಂಚಿನಲ್ಲಿ ನಿಂತಿದ್ದ ಮಗನ ಕೈಹಿಡಿದು ಎಳೆಯಲು ಮುಂದಾಗಿದ್ದರು, ಆದರೆ ಈ ವೇಳೆ ಇಬ್ಬರು ಸಮತೋಲನ ತಪ್ಪಿ 250 ಅಡಿ ಆಳದ ಕಂದಕಕ್ಕೆ ಬಿದ್ದರು. ತನ್ನ ಕಣ್ಣೆದುರೆ ಕೈ ಹಿಡಿದ ಗಂಡ, ಹೆತ್ತ ಮಗ ಇಬ್ಬರು ಮೃತ್ಯು ಕೂಪಕ್ಕೆ ಹೋಗಿದ್ದನ್ನು ಕಂಡ ತಾಯಿ ಸಂಗೀತ ತೀವ್ರ ಆಘಾತಕ್ಕೆ ಒಳಗಾದರು. ಕೆಲವೇ ಸೆಕೆಂಡುಗಳ ಅಂತರದಲ್ಲಿ ತಾವೂ ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟರು.
ಈ ಘಟನೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಯುವಕ ಕುನಾಲ್ನ ಹಳೆ ವಿಡಿಯೋಗಳು ಸೋಷಿಯಲ್ ಮಿಡೀಯಾದಲ್ಲಿ ವೈರಲ್ ಆಗಿದ್ದು, ಕುನಾಲ್ ತನ್ನ ತಾಯಿಯ ಪಾದ ತೊಳೆದು ಆಶೀರ್ವಾದ ಪಡೆಯುತ್ತಿರುವ ಮತ್ತು ಜೊತೆಯಾಗಿ ಚಹಾ ಸೇವಿಸುತ್ತಿರುವ ಹಳೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವು ನೆಟ್ಟಿಗರ ಕಣ್ಣಾಲಿಗಳನ್ನು ತೇವಗೊಳಿಸಿವೆ. ಕ್ಷಣಿಕ ಆವೇಶ ಹಾಗೂ ಭೌತಿಕ ವಸ್ತುಗಳ ವ್ಯಾಮೋಹ ಎಷ್ಟು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.