Search


4ಜನ ಡಿಸಿಎಂ.. ಜಾರಕಿಹೋಳಿಗೆ ಕೆಪಿಸಿಸಿ ಪಟ್ಟ ; ಹೊಸ ಸರ್ಕಾರದಲ್ಲಿ ಮಹತ್ವದ ಬದಲಾವಣೆ...!

ಬೆಂಗಳೂರು : ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಪ್ರಕ್ರಿಯೆ ಬೆನ್ನಲ್ಲೇ, ರಾಜ್ಯ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಮುಖ ಹಾಗೂ ಮಹತ್ವದ ಬದಲಾವಣೆಗಳಿಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ ಎಂಬುದು ತಿಳಿದುಬಂದಿದೆ. ಸಾಂವಿಧಾನಿಕ ನಿಯಮಗಳ ಪ್ರಕಾರ, ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ನೀಡಿದ ತಕ್ಷಣ ಅವರ ಇಡೀ ಸಚಿವ ಸಂಪುಟವು ಸ್ವಯಂಚಾಲಿತವಾಗಿ ರದ್ದಾಗುತ್ತದೆ ಮತ್ತು ಸಚಿವರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ. 

ಹೊಸ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ನಂತರವೇ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕಾಗುತ್ತದೆ. ಈ ತಾಂತ್ರಿಕ ಪ್ರಕ್ರಿಯೆಯನ್ನೇ ಬಳಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ಇಡೀ ತಂಡವನ್ನೇ ಬದಲಾಯಿಸಲು ಮುಂದಾಗಿದ್ದು, ಜಿದ್ದಾಜಿದ್ದಿಗೆ ಬಿದ್ದಿರುವ ಬಣಗಳನ್ನು ಶಾಂತಗೊಳಿಸಲು ಭಾರಿ ಜಾತಿ ಸಮೀಕರಣದ ಹೊಸ ಸೂತ್ರವನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಸಿದ್ದರಾಮಯ್ಯ ರಾಜಕೀಯ ಹಿರಿತನ ಹಾಗೂ ಗೌರವಕ್ಕೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಲು ಹೈಕಮಾಂಡ್ ಹಲವು ಪ್ರಮುಖ ಭರವಸೆಗಳನ್ನು ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೊಸ ಸಚಿವ ಸಂಪುಟದಲ್ಲಿ 4 ಡಿಸಿಎಂ ಹುದ್ದೆಗಳನ್ನ ಸೃಷ್ಟಿಸಲು ಹೈಕಮಾಂಡ್‌ ಪ್ಲಾನ್‌ ಮಾಡಿದ್ದು. ಸಿದ್ದರಾಮಯ್ಯರ ಪುತ್ರನಿಗೂ ಡಿಸಿಎಂ ಸ್ಥಾನ ಸಿಗುವ ಸಾಧ್ಯತೆ ಇದೆ. ಜೊತೆಗೆ ದಲಿತ ಕೋಟಾದಲ್ಲಿ ಪ್ರಿಯಾಂಕ ಖರ್ಗೆ, ಮುಸ್ಲಿಂ ಕೋಟಾದಲ್ಲಿ ಜಮೀರ್‌ ಅಹಮದ್‌ ಅಥವಾ ಯು.ಟಿ ಖಾದರ್‌, ಲಿಂಗಾಯತ ಕೋಟಾದಲ್ಲಿ ಈಶ್ವರ ಖಂಡ್ರೆ ಅಥವಾ ಎಂ.ಬಿ. ಪಾಟೀಲ್ ಹಾಗೂ ಅಲ್ಪಸಂಖ್ಯಾತ ಕೋಟಾದಲ್ಲಿ ಕೆ.ಜೆ. ಜಾರ್ಜ್ ಅವರ ಹೆಸರುಗಳು ರೇಸ್‌ನಲ್ಲಿವೆ ಎಂದು ಹೇಳಲಾಗುತ್ತಿದೆ.

ಇನ್ನು ಡಿಕೆ ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಬಿಟ್ಟುಕೊಡಲಿದ್ದು. ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಬೇಕಾಗುತ್ತದೆ. ಮೊದಲಿನಿಂದಲೂ ಈ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವೂ ಸಿಗುವ ದಟ್ಟ ಸಾಧ್ಯತೆಗಳಿವೆ. ಈ ನಡುವೆ ಶಾಸಕ ವಿಶ್ವಾಸ್ ವಸಂತ್ ವೈದ್ಯ ಅವರು ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದು, ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷ ಸಂಘಟನೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.

By News Desk - 28-05-2026


Ads in Post