ಮುಂಬೈ: ಅಯೋಧ್ಯೆ ರಾಮಮಂದಿರದಲ್ಲಿ(Ram Mandir) ಹಣ ಕಳವು ಪ್ರಕರಣ ದೇಶದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿದ್ದು, ದೇವಾಲಯದಲ್ಲಿದ್ದ ಚಿನ್ನ, ಬೆಳ್ಳಿಗೂ ಖದೀಮರು ಖನ್ನ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಇದರ ನಡುವೆ ಶಿವಸೇನೆ ಉದ್ದವ್ ಬಣದ ಸಂಸದ ಸಂಜಯ್ ರಾವತ್, ದೇವಾಲಯಕ್ಕೆ ಉದ್ದವ್ ಠಾಕ್ರೆ ಕೊಟ್ಟಿದ್ದ 4 ಕೆಜಿ ಬೆಳ್ಳಿ ಇಟ್ಟಿಗೆಗಳು ಕಾಣೆಯಾಗಿದೆ ಎಂದು ಆರೋಪಿಸಿದ್ದು. ಜೊತೆಗೆ ಇದರ ಕುರಿತು ಸಮಗ್ರ ತನಿಖೆ ನಡೆಸಲು ಆಗ್ರಹಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರ(Ram Mandir) ನಿರ್ಮಾಣಕ್ಕಾಗಿ ಶಿವಸೇನೆ (UBT) ನೀಡಿದ್ದ 4 ಕೆಜಿ ಬೆಳ್ಳಿ(Silver Donation) ಇಟ್ಟಿಗೆ ನಾಪತ್ತೆಯಾಗಿದೆ ಎಂದು ಆರೋಪಿಸಿರುವ ಸಂಸದ ಸಂಜಯ್ ರಾವತ್, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ತಮ್ಮ ‘ಎಕ್ಸ್’ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಸಂಜಯ್ ರಾವತ್, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ 1 ಕೋಟಿ ರೂ. ದೇಣಿಗೆ ನೀಡಿದ್ದರು. ಇದರ ಜೊತೆಗೆ 4 ಕೆಜಿ ಬೆಳ್ಳಿ ಇಟ್ಟಿಗೆಯನ್ನೂ ಸಾವಿರಾರು ಶಿವಸೈನಿಕರು ಹಾಗೂ ಸಂತರ ಸಮ್ಮುಖದಲ್ಲಿ ಅರ್ಪಿಸಲಾಗಿತ್ತು ಎಂದು ಹೇಳಿದ್ದಾರೆ.
ಇಷ್ಟು ವರ್ಷ ಕಳೆದರೂ ಬೆಳ್ಳಿ ಇಟ್ಟಿಗೆ ಸ್ವೀಕರಿಸಿದ ಬಗ್ಗೆ ಟ್ರಸ್ಟ್ನಿಂದ ಯಾವುದೇ ರಶೀದಿ ಅಥವಾ ಮಾಹಿತಿ ಬಂದಿಲ್ಲ. ಆ ಬೆಳ್ಳಿ ಇಟ್ಟಿಗೆ ಎಲ್ಲಿಗೆ ಹೋಯಿತು ಎಂಬುದರ ಬಗ್ಗೆ ತನಿಖೆ ನಡೆಸಬೇಕು. ಇದಕ್ಕೆ ಸಂಬಂಧಿಸಿದವರು ಉತ್ತರ ನೀಡಬೇಕು ಎಂದು ರಾವತ್ ಆಗ್ರಹಿಸಿದ್ದಾರೆ. ಇದಕ್ಕೂ ಮುನ್ನವೇ 200 ಕೆಜಿ ಬೆಳ್ಳಿ ಇಟ್ಟಿಗೆಯ ಮಾಹಿತಿ ಕೊಡಿ ಎಂದು ಒಂದು ದಿನದ ಹಿಂದೆಯಷ್ಟೇ ಸಿಂಧಿ ಸಮುದಾಯ ಕೇಳಿತ್ತು.
ಎಸ್ಐಟಿ ತನಿಖೆ ಚುರುಕು..!
ರಾಮಮಂದಿರದಲ್ಲಿ ದೇಣಿಗೆ ಕಳವು ಪ್ರಕರಣದ ಬಗ್ಗೆ ತನಿಖೆ ತೀವ್ರವಾಗಿದ್ದು, ಉತ್ತರ ಪ್ರದೇಶ ಸರ್ಕಾರದ ನಿರ್ದೇಶನದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅನುಕಲ್ಪ್ ಮಿಶ್ರಾ, ಲವ್ಕುಶ್ ಮಿಶ್ರಾ, ಅವಿನಾಶ್ ಶುಕ್ಲಾ, ಟಿನ್ನು ಯಾದವ್, ಮನೀಶ್ ಯಾದವ್ ಸೇರಿದಂತೆ ಹಲವರ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಅಯೋಧ್ಯೆಯ ಮಾಜಿ ಸಮಾಜವಾದಿ ಪಕ್ಷದ ಶಾಸಕ ಪವನ್ ಪಾಂಡೆ, ರಾಮ ಮಂದಿರಕ್ಕೆ ಬಂದ 7ರಿಂದ 7.5 ಕೋಟಿ ರೂ. ದೇಣಿಗೆ ದುರ್ಬಳಕೆಯಾಗಿದೆ ಎಂದು ಆರೋಪಿಸಿದ್ದರು. ಈ ಆರೋಪದ ಬಳಿಕ ಶ್ರೀರಾಮ ಜನ್ಮಭೂಮಿ ಮಂದಿರ ಟ್ರಸ್ಟ್ ಮನವಿ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಮೂರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆಗೆ ಆದೇಶಿಸಿದೆ.