ಪುಣೆ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಕಾಮತೃಷೆ ತೀರಿಸಿಕೊಂಡು, ಬಳಿಕ ಆ ಮಗುವನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದ 65 ವರ್ಷದ ವ್ಯಕ್ತಿಗೆ ಪುಣೆ ಕೋರ್ಟ್ (Pune) ಗಲ್ಲುಶಿಕ್ಷೆ ವಿಧಿಸಿದೆ. ಘಟನೆ ನಡೆದ 2ತಿಂಗಳಲ್ಲೆ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದ್ದು, ಈ ಘಟನೆ ಸಮಾಜದ ಆತ್ಮಸಾಕ್ಷಿಯನ್ನೇ ಬೆಚ್ಚಿ ಬೀಳಿಸಿದೆ ಎಂದು ನ್ಯಾಯಪೀಠ ಆಘಾತ ವ್ಯಕ್ತಪಡಿಸಿದೆ.
ಏನಿದು ಪ್ರಕರಣ..!
ಕಳೆದ ತಿಂಗಳು ಮೇ 1ರಂದು ಪುಣೆ ಜಿಲ್ಲೆಯ ಭೋರ್ ತಹಸಿಲ್ನಲ್ಲಿರುವ ನಸ್ರಾಪುರ ಗ್ರಾಮದಲ್ಲಿ ಘಟನೆ ವರದಿಯಾಗಿತ್ತು. ಭೀಮರಾವ್ ಕಾಂಬ್ಳೆ ಎಂಬ 65 ವರ್ಷದ ಆರೋಪಿಯು 3 ವರ್ಷದ ಮಗುವನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದನು. ನಂತರ ಮಗು ಯಾರಿಗಾದರೂ ವಿಷಯ ತಿಳಿಸಬಹುದು ಎಂಬ ಭಯದಿಂದ ಮಗುವಿನ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದನು. ನಂತರ ಆಕೆಯ ಶವವನ್ನು ಹಸುಗಳ ಕೊಟ್ಟಿಗೆಯಲ್ಲಿ ಬಚ್ಚಿಟ್ಟಿದ್ದನು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೇವಲ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು...!
ಇನ್ನು ಈ ಪ್ರಕರಣದ ವೇಗದ ವಿಚಾರಣೆಗಾಗಿ ಫಾಸ್ಟ್ಟ್ರ್ಯಾಕ್ ಕೋರ್ಟ್ ಸ್ಥಾಪಿಸಲಾಗಿತ್ತು. ಇಂದು ಈ ಪ್ರಕರಣದ ಅಂತಿಮ ತೀರ್ಪು ನೀಡಿದ ನ್ಯಾಯಾಲಯ ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದೆ “ಈ ಅಪರಾಧವನ್ನು ಅತ್ಯಂತ ಕ್ರೂರವಾಗಿ ಎಸಗಲಾಗಿದ್ದು, ಇದರಲ್ಲಿ ಸಂತ್ರಸ್ತ ಮಗುವಿಗೆ ಅಮಾನವೀಯ ಹಿಂಸೆ ನೀಡಲಾಗಿದೆ. ಸಂತ್ರಸ್ತೆ ಅತ್ಯಂತ ನಿರಪರಾಧಿ ಮತ್ತು ಅಸಹಾಯಕ ಮಗುವಾಗಿದ್ದಳು. ಕಾಮದ ಹಸಿವನ್ನು ನೀಗಿಸಿಕೊಳ್ಳಲು ಈ ಕೊಲೆ ಮಾಡಲಾಗಿದ್ದು, ಇದು ಸಂಪೂರ್ಣ ನೈತಿಕ ಪತನವನ್ನು ತೋರಿಸುತ್ತದೆ. ಇದು ಯಾವುದೇ ಪ್ರಚೋದನೆಯಿಲ್ಲದೆ ನಡೆದ ಕೊಲೆಯಾಗಿದೆ. ಈ ಅಪರಾಧವನ್ನು ಎಷ್ಟು ಕ್ರೂರವಾಗಿ ಮಾಡಲಾಗಿದೆಯೆಂದರೆ, ಇದು ಕೇವಲ ನ್ಯಾಯಾಂಗದ ಆತ್ಮಸಾಕ್ಷಿಯನ್ನು ಮಾತ್ರವಲ್ಲದೆ ಇಡೀ ಸಮಾಜದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸಿದೆ” ಎಂದು ನ್ಯಾಯಾಧೀಶ ಸಾಳುಂಖೆ ಉಲ್ಲೇಖಿಸಿದ್ದಾರೆ.
ವಿಶೇಷ ಪೋಕ್ಸೋ (POCSO) ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಸಾಳುಂಖೆ ಅವರು ಈ ತೀರ್ಪನ್ನು ಪ್ರಕಟಿಸಿದ್ದಾರೆ. ಈ ಪ್ರಕರಣವನ್ನು “ಅಪರೂಪದಲ್ಲೇ ಅಪರೂಪದ ಪ್ರಕರಣ” ಎಂದು ವರ್ಗೀಕರಿಸಿದ ನ್ಯಾಯಾಲಯ, ಸಮಾಜದಲ್ಲಿ ಇಂತಹ ಘೋರ ಕೃತ್ಯಗಳಿಗೆ ಯಾವುದೇ ಕ್ಷಮೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಆರೋಪಿಗೆ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮರಣದಂಡನೆ ಹಾಗೂ ಭಾರಿ ದಂಡವನ್ನು ವಿಧಿಸಿದೆ. ತನಿಖೆಯ ಸಂದರ್ಭದಲ್ಲಿ ಪೊಲೀಸರು ಮಂಡಿಸಿದ ಬಲವಾದ ವೈಜ್ಞಾನಿಕ ಮತ್ತು ವೈದ್ಯಕೀಯ ಸಾಕ್ಷ್ಯಾಧಾರಗಳು ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.