ವಿಶಾಖಪಟ್ಟಣ : ಆಂದ್ರಪ್ರದೇಶದಲ್ಲಿರುವ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್) ನಲ್ಲಿ ಸೋಮವಾರ ಭಾರಿ ದುರಂತ ಸಂಭವಿಸಿದೆ. ಕ್ರೇನ್‌ನಲ್ಲಿ ದೊಡ್ಡ ಬಕೆಟ್ ಮೂಲಕ ಸಾಗಿಸುತ್ತಿದ್ದ ಕುದಿಯುವ ಉಕ್ಕಿನ ಲಾವ ಸ್ಪೋಟಗೊಂಡಿದ್ದು, ಈ ವೇಳೆ ಅಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಈ ಲಾವ ಬಿದ್ದಿದೆ. ಇದರಿಂದಾಗಿ ಸ್ಥಳದಲ್ಲೇ 8 ಜನ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಸಚಿವ ಹೆಚ್‌ಡಿಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಅಪಘಾತದ ಸಮಯದಲ್ಲಿ ಕರಗಿದ ಉಕ್ಕು ಸುಮಾರು 1,600°C ಗರಿಷ್ಠ ತಾಪಮಾನದಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡ ಬಕೆಟ್‌ನಲ್ಲಿ ಸಾಗಿಸುತ್ತಿದ್ದ ಕರಗಿದ ಉಕ್ಕು ಒಮ್ಮೆಲೇ ಸ್ಪೋಟಗೊಂಡಿದ್ದರಿಂದ ಅಪಘಾತ ಸಂಭವಿಸಿದೆ, ಈ ವೇಳೆ ಕಾರ್ಮಿಕರು ತಮ್ಮ ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಉಕ್ಕು ಸ್ಥಾವರ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಗಳನ್ನು ಪ್ರಾರಂಭಿಸಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.
25 ಲಕ್ಷ ಪರಿಹಾರ ಘೋಷಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ...!
ಇನ್ನು ದುರಂತದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿಯನ್ನ ಆ ದೇವರು ನೀಡಲಿ, ಆ ಕುಟುಂಬಗಳ ಜೊತೆ ನಾವು ಸದಾ ಕಾಲ ನಿಂತುಕೊಳ್ಳುತ್ತೇವೆ, ಮೃತ ಕಾರ್ಮಿಕರಿಗೆ ನೀಡಿರುವ ಮನೆಯಲ್ಲಿ ಅವರ ಕುಟುಂಬಗಳು ಶಾಶ್ವತವಾಗಿ ನೆಲಸಬಹುದು ಎಂದಿದ್ದಾರೆ. ಜೊತೆಗೆ ಘಟನೆಯಲ್ಲಿ ಮೃತ ಪಟ್ಟವರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿದ್ದು, ಗಾಯಗೊಂಡವರ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಗಳನ್ನು ಸಂಘಟಿಸಲು ಮತ್ತು ತ್ವರಿತಗೊಳಿಸಲು ಎಲ್ಲಾ ಸಂಬಂಧಿತ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ.