Search


ರಾಮ ಮಂದಿರಕ್ಕೆ ನೀಡಿದ್ದ 147 ಕೆಜಿ ತೂಕದ ಚಿನ್ನ ಲೇಪಿತ ಪುಸ್ತಕ ನಾಪತ್ತೆ..!

ಅಯೋಧ್ಯೆ: ರಾಮಮಂದಿರ ದೇಣಿಗೆ ಲೂಟಿ ಹಗರಣ (Ram Mandir Donation Row) ದೇಶವ್ಯಾಪಿ ಸಂಚಲನ ಸೃಷ್ಟಿಸಿದೆ. ಇದರ ನಡುವೆ ಬಾಲ ರಾಮನಿಗೆ ನೀಡಿದ್ದ ಉಡುಗೊರೆಗಳು ನಾಪತ್ತೆಯಾಗಿದೆ ಎಂಬ ಗಂಭೀರ ಆರೋಪ ಬಂದಿದೆ. ಎಸ್. ಲಕ್ಷ್ಮಿನಾರಾಯಣ್ ಎಂಬುವವರು ದೇವಾಲಯಕ್ಕೆ ನೀಡಿದ ಚಿನ್ನ ಲೇಪಿತ ʻರಾಮಚರಿತಮಾನಸʼ ಪುಸ್ತಕ ಕಾಣೆಯಾಗಿದೆ ಎಂದು ತಿಳಿದು ಬಂದಿದೆ. 

ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮಿನಾರಾಯಣ್ ಅವರ ಕುಟುಂಬ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಿದ್ದ ಚಿನ್ನದ ಲೇಪಿತ ʻರಾಮಚರಿತಮಾನಸʼ (Ramcharitmanas) ಕಾಣೆಯಾಗಿದೆ ಎಂದು ಆರೋಪಿಸಿದ್ದಾರೆ. ಎಷ್ಟೇ ವಿನಂತಿ ಮಾಡಿದರು ನೀಡಿದ್ದ ಕಾಣಿಕೆಗೆ ರಶೀದಿ ನೀಡಿಲ್ಲ, ನೀಡಿದ್ದ ಉಡುಗೊರೆ ಸುರಕ್ಷಿತವಾಗಿದೆಯೋ ಅನ್ನೋದು ತಿಳಿದಿಲ್ಲ, ಈ ಕುರಿತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮನವಿ ಮಾಡಿದರು, ರಶೀದಿ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

522 ಪುಟಗಳ ಚಿನ್ನ ಲೇಪಿತ ಪುಸ್ತಕ...!

ಲಕ್ಷ್ಮೀ ನಾರಾಯಣ್‌ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು ʻ2024ರ ಏಪ್ರಿಲ್‌ನಲ್ಲಿ ನನ್ನ ಪತ್ನಿ ಸರಸ್ವತಿ ಜೊತೆಗೆ ಅಯೋಧ್ಯೆಗೆ ಭೇಟಿ ನೀಡಿದ್ದೆ. ಆಗ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಚಿನ್ನಲೇಪಿತ ʻರಾಮಚರಿತಮಾನಸʼ ಪುಸ್ತಕವನ್ನ ನೀಡಿದೆ. ಆ ಸಮಯದಲ್ಲಿ ಯಾವುದೇ ರಶೀದಿ ನೀಡಲಿಲ್ಲ. ಅದನ್ನ ರಾಮ ಮಂದಿರದ ಗರ್ಭಗುಡಿಯಲ್ಲಿ ಇಡಲಾಗುವುದು ಎಂದು ಹೇಳಿದ್ದರು.

2 ಬಾರಿ ಚಂಪತ್ ರಾಯ್ ಅವರನ್ನ ಭೇಟಿಯಾಗಿ ರಶೀದಿ ಕೇಳಿದೆ. ಮೊದಲ ಬಾರಿ ಭೇಟಿಯಾದಾಗ 9 ಗಂಟೆ, 2ನೇ ಬಾರಿ ಭೇಟಿಯಾದಾಗ 4 ಗಂಟೆಗಳ ಕಾಲ ಅದಕ್ಕಾಗಿ ಕಾದುಕುಳಿತಿದ್ದೆ. ಇಲ್ಲಿಯವರೆಗೂ ರಶೀದಿ ನೀಡಿಲ್ಲ. 147 ಕೆಜಿ ತೂಕದ ʻರಾಮಚರಿತಮಾನಸʼ ಪುಸ್ತಕದ 522 ಪುಟಗಳೂ ಚಿನ್ನಲೇಪಿತವಾಗಿದ್ದವು ಎಂದು ಲಕ್ಷ್ಮಿನಾರಾಯಣ್‌ ಆರೋಪಿಸಿದ್ದಾರೆ. ಈ ಪುಸ್ತಕ ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ್ದು, ದಿವಂಗತ ನನ್ನ ತಾಯಿಯ ನೆನಪಿನಲ್ಲಿ ಅದನ್ನು ಕಾಣಿಕೆಯಾಗಿ ನೀಡಿದ್ದೆ ಹೇಳಿಕೊಂಡಿದ್ದಾರೆ.

By Ravikumar - 05-07-2026


Ads in Post