ಚಿಕ್ಕಬಳ್ಳಾಪುರ : ಆಪಲ್ ಎಂದ ಕೂಡಲೇ ನೆನಪಿಗೆ ಬರೋದು ಕಾಶ್ಮೀರ. ಹಿಮ್ಮಚ್ಚಾದಿತ ಭೂಮಿಯಲ್ಲಿ ಆಪಲ್ ಗಿಡಗಳು ನಳನಳಿಸುತ್ತವೆ, ಏಕೆಂದರೆ ಆಪಲ್ ಶೀತ ವಲಯದಲ್ಲಿ ಬೆಳೆಯುವ ಪ್ರಮುಖ ಬೆಳೆಗಳಲ್ಲಿ ಒಂದು. ಭಾರತದಲ್ಲಿ ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ್‌ನಲ್ಲಿ ಆಪಲ್ ಬೆಳೆಯುವುದನ್ನ ಕಾಣಬಹುದು. ಆದರೆ ಕುಡಿಯುವ ನೀರಿಗಾಗಿ ಪರದಾಡುವ ಚಿಕ್ಕಬಳ್ಳಾಪುರದಲ್ಲಿ ಯುವ ರೈತರೊಬ್ಬರು ಆಪಲ್ ಬೆಳೆಯನ್ನು ಬೆಳೆಯುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ಲ ಗ್ರಾಮದ ರೈತ ಅನಿಲ್ ಎನ್ನುವವರು ತನ್ನ ಮುಕ್ಕಾಲು ಎಕರೆ ಜಮೀನಿನಲ್ಲಿ ಸೇಬು ಬೆಳೆ ಬೆಳೆದಿದ್ದಾರೆ. ಬೆಂಕಿಯಂತ ಬಿಸಿಲಿನಲ್ಲಿ ಅನಿಲ್ ಈ ಸಾಹಸಕ್ಕೆ ಕೈ ಹಾಕಿದ್ದು. ಒಂದು ವರ್ಷದ ಹಿಂದೆ ಹಾಕಿದ ಗಿಡಗಳು ಈಗ ಫಸಲು ಕೊಡುತ್ತಿವೆ. ಸುಮಾರು 400 ಗಿಡಗಳನ್ನ ತಮ್ಮ ಹೊಲದಲ್ಲಿ ಬೆಳೆಸಿರುವ ಅನಿಲ್, ಗಿಡಗಳನ್ನ ಮಗುವಂತೆ ಹಾರೈಕೆ ಮಾಡಿ, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಸೇಬಿಗೆ ಬರೋಬ್ಬರಿ 250 ರೂಪಾಯಿ ಬೆಲೆಯಿದ್ದು. ತಮ್ಮ ಶ್ರಮಕ್ಕೆ ಉತ್ತಮ ಪ್ರತಿಫಲ ಭರವಸೆಯಲ್ಲಿದ್ದಾರೆ.
ಜೊತೆಗೆ ಈಶಾ ಫೌಂಡೇಶನ್‌ಗೆ ತೆರಳುವ ಪ್ರವಾಸಿಗರು, ಈ ಆಪಲ್ ತೋಟವನ್ನು ಕಂಡು ಮೂಕ ವಿಸ್ಮಿತರಾಗುತ್ತಿದ್ದು. ಆಪಲ್ ತೋಟಕ್ಕೆ ಭೇಟಿ, ಆಪಲ್ ಗಿಡಗಳ ಪಕ್ಕ ನಿಂತು ಫೋಟೋ ತೆಗೆಸಿಕೊಂಡು ಖುಷಿ ಪಡುತ್ತಿದ್ಧಾರೆ.