Search


ಅನೈತಿಕ ಸಂಬಂಧವನ್ನ ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಮಗನನ್ನೇ ಕೊಂದ ಮಹಾತಾಯಿ..!

ಕರ್ನೂಲ್: ತಾಯಿಯ ಅನೈತಿಕ ಸಂಬಂಧವನ್ನು (illicit affairs) ಪ್ರಶ್ನಿಸಿದ ಅಪ್ರಾಪ್ತ ಮಗನನ್ನ, ತಾಯಿ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ(Andhrapradesh) ಕರ್ನೂಲ್ (Kurnool) ಜಿಲ್ಲೆಯ ಆದೋನಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಮೃತ ಬಾಲಕನನ್ನ 15 ವರ್ಷದ ವೀರೇಂದ್ರ ಎಂದು ಗುರುತಿಸಲಾಗಿದೆ

ಮೃತನ ತಾಯಿ ಗಂಗಮ್ಮ, ದರ್ಗಪ್ಪ ಎಂಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವಿತ್ತು. ಇದರ ಬಗ್ಗೆ ಮಗ ವೀರೇಂದ್ರ ಆಗಾಗ ಪ್ರಶ್ನಿಸುತ್ತಿದ್ದನು. ಅಲ್ಲದೇ ಸಂಬಂಧಿಕರು ಮತ್ತು ಗ್ರಾಮಸ್ಥರ ಮುಂದೆಯೂ ಈ ವಿಚಾರವನ್ನು ಹೇಳಿದ್ದ. ಹೀಗಾಗಿ ಮಗನಿಂದಲೇ ತನ್ನ ಅಕ್ರಮ ಸಂಬಂಧ ಬಹಿರಂಗವಾಗುತ್ತದೆ ಎಂಬ ಆತಂಕದಲ್ಲಿ ತಾಯಿ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ಬಾಲಕನನ್ನು ಕೊಲೆ ಮಾಡಿದ್ದಾರೆ.

ಕೊಲೆ ಬಳಿಕ ವೀರೇಂದ್ರನ ಮೃತದೇಹವನ್ನು ಗ್ರಾಮದ ಹೊರವಲಯದ ಸ್ಮಶಾನದಲ್ಲಿ ರಹಸ್ಯವಾಗಿ ಹೂತು ಹಾಕಿದ್ದಾರೆ. ಆನಂತರ ಕೊಲೆ ವಿಚಾರವನ್ನು ಮುಚ್ಚಿ ಹಾಕಲು ಗಂಗಮ್ಮ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಅಲ್ಲದೆ ಮಗನ ಹುಡುಕಾಟದಲ್ಲಿಯೂ ಭಾಗಿಯಾಗಿದ್ದಳು. 

ಮಗನ ಹುಡುಕುವಂತೆ ಹೈಕೋರ್ಟ್‌ ಮೊರೆ ಹೋಗಿದ್ದ ತಾಯಿ

ಇಷ್ಟೇ ಅಲ್ಲದೆ, ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಗಂಗಮ್ಮ ಹೈಕೋರ್ಟ್‌ ಮೆಟ್ಟಿಲೇರಿದ್ದಳು, ಪೊಲೀಸರು ಮಗನ ಪತ್ತೆಗೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಿದ್ದಳು. ಹೈಕೋರ್ಟ್ ಸೂಚನೆಯ ಬಳಿಕ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ಕರೆ ವಿವರಗಳು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಸ್ಥಳೀಯ ಸಾಕ್ಷಿದಾರರ ಮಾಹಿತಿ ಪಡೆದ ಪೊಲೀಸರಿಗೆ ತಾಯಿಯ ಮೇಲೆಯೇ ಅನುಮಾನ ಮೂಡಿದೆ. ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಂದಿದೆ.

ಜೂ.1ರಂದು ಗ್ರಾಮದ ಸ್ಮಶಾನದಲ್ಲಿ ಹೂತಿದ್ದ ವೀರೇಂದ್ರನ ಮೃತದೇಹವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಹೊರತೆಗೆಯಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

By Ravikumar - 04-06-2026


Ads in Post