Search


ತಾಯಿಯ ಮಡಿಲಲ್ಲಿದ್ದ ಒಂದುವರೆ ವರ್ಷದ ಮಗು ತಲೆ ಮೇಲೆ ತೆಂಗಿನಕಾಯಿ ಬಿದ್ದು ಸಾ*ವು..!

ಉಡುಪಿ: ಹೆತ್ತಮ್ಮನ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗುವಿನ ತಲೆ ಮೇಲೆ ತೆಂಗಿನಕಾಯಿ ಬಿದ್ದು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಉಡುಪಿಯ, ಬ್ರಹ್ಮಾವರ ತಾಲ್ಲೂಕಿನ ಚಾಂತಾರು ಹೆರಂಜೆ ಗ್ರಾಮದಲ್ಲಿ ನಡೆದಿದೆ, ಘಟನೆಯಿಂದ ಇಡೀ ಊರೇ ದಿಗ್ಬ್ರಮೆಗೆ ಒಳಗಾಗಿದ್ದು, ಸಂಪೂರ್ಣ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.

ಚಾಂತಾರು ಹೆರಂಜೆ ಗ್ರಾಮದ ನಿವಾಸಿಗಳಾದ ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ ಎರಡನೇ ಪುತ್ರ ದಕ್ಷ (ಒಂದೂವರೆ ವರ್ಷ) ಮೃತಪಟ್ಟ ದುರ್ದೈವಿ. ಮನೆಯ ಸಮೀಪ ತಾಯಿ ಸುಚಿತ್ರಾ ಅವರು ಮಗುವನ್ನು ಎತ್ತಿಕೊಂಡು ಮಡಿಲಲ್ಲಿ ಇಟ್ಟುಕೊಂಡಿದ್ದ ವೇಳೆ, ಸಮೀಪದ ತೆಂಗಿನ ಮರದಿಂದ ಏಕಾಏಕಿ ತೆಂಗಿನಕಾಯಿಯೊಂದು ಉದುರಿ ನೇರವಾಗಿ ಮಗುವಿನ ತಲೆಯ ಮೇಲೆ ಬಿದ್ದಿದೆ. 

ಈ ಪೆಟ್ಟಿನಿಂದಾಗಿ ಮಗು ದಕ್ಷ ತೀವ್ರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾನೆ. ಘಟನೆಯಿಂದ ತಾಯಿ ಹಾಗೂ ಕುಟುಂಬಸ್ಥರು ಕಂಗೆಟ್ಟು ಆಕ್ರಂದನ ಮುಗಿಲು ಮುಟ್ಟಿದೆ. ತಕ್ಷಣವೇ ಸ್ಥಳೀಯರ ಸಹಾಯದಿಂದ ರಕ್ತದ ಮಡುವಿನಲ್ಲಿದ್ದ ಮಗುವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ಇನ್ನು ವೈದ್ಯರು ಮಗುವಿನ ಪ್ರಾಣ ಉಳಿಸಲು ಹರಸಾಹಸ ಪಟ್ಟಿದ್ದು, ತುರ್ತು ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆದರೆ, ತಲೆಗೆ ಬಲವಾದ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾನೆ. ಮಗು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಪೋಷಕರ ರೋದನ ನೋಡಲಾಗದಂತಿತ್ತು. ಮಗುವಿನ ಕಿಲಕಿಲ ನಗುವಿನಿಂದ ತುಂಬಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.

ಪ್ರಪಂಚದಲ್ಲೇ ಅತಿ ಸುರಕ್ಷಿತವಾದ ಸ್ಥಳ ತಾಯಿಯ ಮಡಿಲು, ಆದರೆ ಈ ಕಂದಮ್ಮ ಆ ತಾಯಿಯ ಮಡಿಲಲ್ಲಿ ಇರುವಾಗಲೇ ಕ್ರೂರ ವಿಧಿಯಾಟಕ್ಕೆ ಬಲಿಯಾಗಿರುವುದು ಇಡೀ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.

By Ravikumar - 12-06-2026


Ads in Post