ನ್ಯೂಯಾರ್ಕ್: ಭಾರತದಲ್ಲಿ ಮುಸ್ಲಿಮರನ್ನು ಹೊರಗಿಡಬೇಕು ಎಂದು ಬಯಸುವ ವ್ಯಕ್ತಿ ನಿಜವಾದ ಹಿಂದೂ ಆಗಿರಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ನ್ಯೂಯಾರ್ಕ್ನಲ್ಲಿ ನಡೆದ ‘ಒನ್ ವರ್ಲ್ಡ್, ಒನ್ ಹ್ಯೂಮ್ಯಾನಿಟಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಗಳು ವಿಭಿನ್ನವಾಗಿದ್ದರೂ ಮಾನವೀಯತೆ ಒಂದೇ ಎಂಬ ಸಂದೇಶವನ್ನು ಸಾರಿದರು.
2018ರಲ್ಲಿ ಮುಸ್ಲಿಂ ಸಮುದಾಯದ ಕೆಲವರು ತಮ್ಮನ್ನು ಕೇಳಿದ್ದ ಪ್ರಶ್ನೆಯನ್ನು ನೆನಪಿಸಿಕೊಂಡ ಭಾಗವತ್, ‘ನೀವು ಹಿಂದೂ ಸಂಘಟನೆ ಎಂದು ಹೇಳುತ್ತೀರಿ, ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತೀರಿ. ಹಾಗಾದರೆ ಮುಸ್ಲಿಮರ ಪರಿಸ್ಥಿತಿ ಏನು? ನಮ್ಮನ್ನು ಭಾರತದಿಂದ ಹೊರಹಾಕುತ್ತೀರಾ?’ ಎಂದು ಪ್ರಶ್ನಿಸಿದ್ದರು ಎಂದು ಹೇಳಿದರು. ಅದಕ್ಕೆ ತಾವು ‘ಇಲ್ಲ, ಅದು ಹಿಂದೂತ್ವವಲ್ಲ’ ಎಂದು ಉತ್ತರಿಸಿದ್ದಾಗಿ ಭಾಗವತ್ ತಿಳಿಸಿದರು. ‘ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಒಬ್ಬ ಹಿಂದೂ ಭಾವಿಸಿದರೆ, ಆತ ಹಿಂದೂ ಆಗಿ ಉಳಿಯುವುದಿಲ್ಲ. ಹಿಂದೂ ಎಂದು ಕರೆದುಕೊಳ್ಳಬೇಕಾದರೆ ಎಲ್ಲ ಮಾರ್ಗಗಳೂ ಒಂದೇ ಸತ್ಯದತ್ತ ಕರೆದೊಯ್ಯುತ್ತವೆ ಎಂಬ ನಂಬಿಕೆ ಇರಬೇಕು’ ಎಂದು ಅವರು ಹೇಳಿದರು.
ಧರ್ಮ, ಆಚರಣೆ ಮತ್ತು ನಂಬಿಕೆಗಳು ಬೇರೆಬೇರೆ ಇರಬಹುದು. ಆದರೆ ಎಲ್ಲ ಮಾನವರಿಗೂ ಸಮಾನ ಗೌರವವಿದೆ. ಭಾರತದ ಪರಂಪರೆ ಎಲ್ಲ ಧರ್ಮಗಳ ಜನರಿಗೆ ಆಶ್ರಯ ನೀಡುವಂತಹದ್ದು. ವೈವಿಧ್ಯತೆಯನ್ನು ರಕ್ಷಿಸುವುದರ ಜೊತೆಗೆ ಅದರೊಳಗಿನ ಏಕತೆಯನ್ನು ಗುರುತಿಸಬೇಕು ಎಂದು ಅವರು ಕರೆ ನೀಡಿದರು. ‘ವೈವಿಧ್ಯತೆ ಪ್ರಕೃತಿಯ ನಿಯಮ, ಆದರೆ ಏಕತೆ ಅದರ ಮೂಲ ಸತ್ಯ. ವಿಭಿನ್ನತೆಯನ್ನು ಸ್ವೀಕರಿಸಿ, ಗೌರವಿಸಿ, ಸಂರಕ್ಷಿಸುವುದು ಅಗತ್ಯ’ ಎಂದು ಭಾಗವತ್ ಅಭಿಪ್ರಾಯಪಟ್ಟರು.
ರಾಜಕೀಯವು ಸ್ವಾರ್ಥದ ಆಟವಾಗಿ ಬದಲಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ‘ನಾನು ಮತ್ತು ನನ್ನದು’ ಎಂಬ ಮನೋಭಾವದಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ‘ನಾವು ಮತ್ತು ನಮ್ಮದು’ ಎಂಬ ಚಿಂತನೆ ಬೆಳೆಸಬೇಕು ಎಂದು ಹೇಳಿದರು. 2018ರ ತಮ್ಮ ಭಾಷಣದ ಬಳಿಕ RSS ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದೆ ಎಂದು ಭಾಗವತ್ ತಿಳಿಸಿದರು. ನ್ಯೂಯಾರ್ಕ್ನಲ್ಲಿ ನೀಡಿರುವ ಸಂದೇಶವು ಹಿಂದೂತ್ವದ ಕುರಿತು ತಾವು ಈ ಹಿಂದೆ ವ್ಯಕ್ತಪಡಿಸಿದ್ದ ನಿಲುವಿನ ಮುಂದುವರಿಕೆಯಾಗಿದೆ.