ಮಂಡ್ಯ: ಭಿಕ್ಷಾಟನೆ ನಡೆಸಿ ಜೀವನ ನಡೆಸುತ್ತಿದ್ದ ವೃದ್ದೆ ಮೃತಪಟ್ಟ ನಂತರ ಆಕೆಯ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆಯಾಗಿದೆ. ನಿನ್ನೆ ಬಂದ ಮಾಹಿತಿಯ ಪ್ರಕಾರ ವೃದ್ದೆಯ ಮನೆಯಲ್ಲಿ ಸುಮಾರು 8 ಲಕ್ಷ ಹಣ ಪತ್ತೆಯಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿತ್ತು, ಆದರೆ ಈಗ ಆ ಹಣದ ಮೊತ್ತ ಸುಮಾರು 30 ಲಕ್ಷ ತಲುಪಿದೆ ಎಂದು ತಿಳಿದು ಬಂದಿದೆ.
ಮಂಡ್ಯ (Mandya) ನಗರದ ಗುತ್ತಲು ಬಡಾವಣೆಯಲ್ಲಿ ಮೃತ ನೂರ್ ಉನ್ನೀಸ್ ಅವರು ಸಹೋದರಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರು ಸಹೋದರಿಯರು ಮದುವೆ ಆಗಿರಲಿಲ್ಲ. ಎರಡು ವರ್ಷದ ಹಿಂದೆ ಅಕ್ಕ ನಿಧನರಾಗಿದ್ದರು. ಅದಾದ ಬಳಿಕ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದರು. ನಿನ್ನೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದು, ಸಾವಿನ ಬಳಿಕ ಸ್ಥಳೀಯರು ಮನೆ ಪರಿಶೀಲಿಸಿದ್ದರು. ಈ ವೇಳೆ 30ಕ್ಕೂ ಹೆಚ್ಚು ಮೂಟೆಗಳಲ್ಲಿ ಹಣ ಪತ್ತೆಯಾಗಿದ್ದಾರೆ.
ಸದ್ಯ ಪತ್ತೆಯಾದ ಹಣ ಗುತ್ತಲು ಬಡಾವಣೆಯ ಮಸೀದಿ ಸುಪರ್ದಿಯಲ್ಲಿದೆ. ನಿನ್ನೆ ಸುಮಾರು 8-9 ಲಕ್ಷ ರೂ. ಹಣ ಎಣಿಕೆ ಮಾಡಲಾಗಿದ್ದು, ಇದೀಗ 20 ಮೂಟೆಯಲ್ಲಿರುವ ಹಣ ಎಣಿಕೆ ಬಾಕಿಯಿದೆ. ಸಂಪೂರ್ಣ ಹಣ ಎಣಿಕೆ ಬಳಿಕ ಯಾರಿಗೆ ನೀಡಬೇಕು ಎಂದು ನಿರ್ಧಾರ ಮಾಡುವುದಾಗಿ ಮುಸ್ಲಿಂ ಸಮುದಾಯದ ಮುಖಂಡರು ಮಾಹಿತಿ ಎಂದು ತಿಳಿಸಿದ್ದಾರೆ.
ವೃದ್ಧೆ ಜೀವಂತವಾಗಿದ್ದಾಗ ಯಾರೊಬ್ಬರೂ ಆಕೆಯನ್ನು ನೋಡಿಕೊಳ್ಳಲಿಲ್ಲ, ಊಟಕ್ಕೂ ಗತಿಯಿಲ್ಲದೆ ಭಿಕ್ಷೆ ಬೇಡಿ ಬದುಕಿದ್ದರು. ಆದರೆ ಸಾವಿನ ನಂತರ ಆಕೆ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಸಂಬಂಧಿಕರು ಹಂಚಿಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತವಾಗಿದೆ. ಈ ಘಟನೆ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.