ಮಂಗಳೂರು: ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸೆಪ್ಟೆಂಬರ್ 26ರಂದು ಅವರ ನಿವಾಸದಲ್ಲೇ ವಿಚಾರಣೆ ನಡೆಸುವುದಾಗಿ ಪೊಲೀಸರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಮೇ 25ರಂದು ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಹತ್ಯೆಯಾಗಿತ್ತು. ಪ್ರಕರಣದ ತನಿಖೆ ವೇಳೆ ಆರೋಪಿಗಳೊಂದಿಗೆ ಕಲ್ಲಡ್ಕ ಪ್ರಭಾಕರ ಭಟ್ ಅವರು ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಇದಕ್ಕೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತೀವ್ರ ವಿರೋಧ ವ್ಯಕ್ತಪಡಿಸಿವೆ. ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರ ಪಾತ್ರವೇನು ಎಂಬುದನ್ನು ಸ್ಪಷ್ಟಪಡಿಸದೆ ಅವರಿಗೆ ನೋಟಿಸ್ ನೀಡಿರುವುದು ಸರಿಯಲ್ಲ ಎಂದು ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜಕೀಯ ಪ್ರೇರಿತವಾಗಿ ಹಿಂದೂ ಸಂಘಟನೆಗಳನ್ನು ಗುರಿಯಾಗಿಸುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ವಿಚಾರಣೆ ನೆಪದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶರಣ್ ಪಂಪ್‌ವೆಲ್ ಆರೋಪಿಸಿದ್ದಾರೆ. ಈಗಾಗಲೇ ಎರಡು ಚಾರ್ಜ್‌ಶೀಟ್‌ಗಳು ಸಲ್ಲಿಕೆಯಾಗಿರುವ ಪ್ರಕರಣದಲ್ಲಿ ಮತ್ತೆ ವಿಚಾರಣೆ ನಡೆಸುವ ಅಗತ್ಯವೇನು ಎಂದು ಪ್ರಶ್ನಿಸಿರುವ ಅವರು, ಬಿ.ಸಿ.ರೋಡ್ ಚಲೋಗೆ ಕರೆ ನೀಡಿರುವ ಬೆನ್ನಲ್ಲೇ ನೋಟಿಸ್ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕು. ಇಲ್ಲವಾದರೆ ಹಿಂದೂ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಿಹೆಚ್‌ಪಿ ಹಾಗೂ ಬಜರಂಗದಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.