ಮಹಾರಾಷ್ಟ್ರ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಆಗಮಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಆಘಾತಕಾರಿ ಸುದ್ದಿ ಎದುರಾಗಿದೆ. ಅಭಿಜೀತ್ ಅವರು ಮುಂಬೈನಿಂದ ದೆಹಲಿಗೆ ಬಂದಿಳಿದ ಕೆಲವೇ ಗಂಟೆಗಳಲ್ಲಿ ಅವರ ಅಜ್ಜಿ ಸಾವಿತ್ರಿಬಾಯಿ ದೀಪ್ಕೆ (85) ನಿಧನರಾಗಿದ್ದಾರೆ. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿ ಗ್ರಾಮದ ನಿವಾಸಿಯಾಗಿದ್ದ ಸಾವಿತ್ರಿಬಾಯಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶನಿವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.
ಅಜ್ಜಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಭಿಜೀತ್ ದೀಪ್ಕೆ ಅವರ ಪೋಷಕರಾದ ಭಗವಾನ್ ದೀಪ್ಕೆ ಮತ್ತು ಅನಿತಾ ಅವರು ಛತ್ರಪತಿ ಸಂಭಾಜಿನಗರದಿಂದ ಹಿಂಗೋಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಮತ್ತೊಂದೆಡೆ, ಅಭಿಜೀತ್ ಅವರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಂಭಾಜಿನಗರದ ಎಂಐಡಿಸಿ ವಾಲುಜ್ ಪ್ರದೇಶದಲ್ಲಿರುವ ದೀಪ್ಕೆ ನಿವಾಸದ ಸುತ್ತ ಬ್ಯಾರಿಕೇಡ್ಗಳನ್ನು ಅಳವಡಿಸಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಅಭಿಜೀತ್ ಅವರನ್ನು ವಿಮಾನದೊಳಗೇ ಪೊಲೀಸರು ವಶಕ್ಕೆ ಪಡೆದಿದ್ದರು.
ಕಳೆದ ಒಂದು ವಾರದಿಂದ ಮುಂಬೈ ಮತ್ತು ದೆಹಲಿಯಲ್ಲಿ ಪ್ರತಿಭಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅಭಿಜೀತ್ ದೀಪ್ಕೆ ಅವರು ಫೋನ್ ಮೂಲಕವಷ್ಟೇ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಸದ್ಯ ಅವರು ದೆಹಲಿ ಪೊಲೀಸರ ವಶದಲ್ಲಿರುವುದರಿಂದ ಅಜ್ಜಿಯ ನಿಧನದ ಸುದ್ದಿ ಅವರಿಗೆ ತಲುಪಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಅಭಿಜೀತ್ ಅವರ ಮುಂದಿನ ನಡೆ ಏನಾಗಲಿದೆ ಎಂಬ ಕುತೂಹಲವೂ ಮೂಡಿದೆ.