ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ನಡೆದ SIR ಪ್ರತಿಭಟನೆಯ ವೇಳೆ ಮೂರು ತಿಂಗಳ ಗರ್ಭಿಣಿ ಪತ್ರಕರ್ತೆಯೊಬ್ಬರನ್ನು ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೋಮವಾರ ಮತದಾನದ ಅಕ್ರಮಗಳ ವಿರುದ್ಧ ವಿರೋಧ ಪಕ್ಷಗಳು ಹಮ್ಮಿಕೊಂಡಿದ್ದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಡಿಜಿಟಲ್ ಮಾಧ್ಯಮವೊಂದರಲ್ಲಿ ಕಾರ್ಯನಿರ್ವಹಿಸುವ ರಿಚಾ ಪರಾಶರ್ ಎಂಬ ಪತ್ರಕರ್ತೆ ಆಸ್ಪತ್ರೆಯ ಹಾಸಿಗೆಯಿಂದಲೇ ಘಟನೆ ಕುರಿತು ವಿವರಿಸಿದ್ದಾರೆ. ಪ್ರತಿಭಟನೆಯ ವರದಿಗಾರಿಕೆ ವೇಳೆ ರಾಹುಲ್ ಗಾಂಧಿ ಅವರ ಬಳಿ ಮೈಕ್ ಹಿಡಿದಾಗ ಅವರು ತಮ್ಮ ಎಡ ಹೆಗಲನ್ನು ಹಿಡಿದು ತಳ್ಳಿದರು. ಇದೇ ವೇಳೆ ಅವರ ಅಂಗರಕ್ಷಕರು ಕೂಡ ಜೋರಾಗಿ ನೂಕಿದ್ದರಿಂದ ಮೆಟ್ಟಿಲುಗಳ ಮೇಲೆ ಮುಖ ಹಾಗೂ ಹೊಟ್ಟೆಯ ಭಾಗ ತಾಗಿ ಬಿದ್ದಿದ್ದಾಗಿ ರಿಚಾ ಆರೋಪಿಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಅವರನ್ನು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಸೇರಿದಂತೆ ಹಲವು ನಾಯಕರು ಆಸ್ಪತ್ರೆಗೆ ಭೇಟಿ ನೀಡಿ, ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ಅವರ ನಡೆ ವಿರುದ್ಧ ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸಿದ್ದಾರೆ.
ಇನ್ನು, ಪತ್ರಕರ್ತೆಯ ಆರೋಪಗಳನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಸತ್ಯಕ್ಕೆ ದೂರವಾಗಿವೆ ಎಂದು ಕಾಂಗ್ರೆಸ್ ಹೇಳಿದೆ. ಅಲ್ಲದೆ, ಘಟನೆ ನಡೆದ ಸಮಯ ಹಾಗೂ ಪತ್ರಕರ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ ದಿನಾಂಕದ ಕುರಿತು ಪ್ರಶ್ನೆಗಳನ್ನು ಎತ್ತಿದೆ. ಹೀಗಾಗಿ, ರಾಹುಲ್ ಗಾಂಧಿ ವಿರುದ್ಧ ಕೇಳಿಬಂದಿರುವ ಆರೋಪ ಮತ್ತು ಕಾಂಗ್ರೆಸ್ನ ಪ್ರತಿಕ್ರಿಯೆ ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.