ಬೆಂಗಳೂರು: ದಾವಣಗೆರೆ ಉಪಚುನಾವಣೆಯಲ್ಲಿ ( Davanagere By Election) ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಲು, ಸಚಿವ ಜಮೀರ್ ಅಹಮ್ಮದ್ ಸಂಚು ಮಾಡಿದ್ದರು ಎನ್ನಲಾದ ಆಡಿಯೋ ವೈರಲ್ ಆಗಿದೆ, ಈ ಕುರಿತು ಜಮೀರ್ ಅವರು ಪತ್ರಿಕಾ ಪ್ರಕಟಣೆಯನ್ನ ಬಿಡುಗಡೆ ಮಾಡಿದ್ದು "ನನ್ನದು ಎನ್ನಲಾದ ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರೋದನ್ನ ನೋಡಿದ್ದೇನೆ, ಆದರೆ ಈ ಆಡಿಯೋ ನಕಲಿ, ಎಐ ತಂತ್ರಜ್ಞಾನ ಬಳಸಿಕೊಂಡು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವೈರಲ್ ಆಗುತ್ತಿರುವ ಆಡಿಯೋ ಬಗ್ಗೆ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹೇಳಿಕೆಯಲ್ಲಿ "ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ, ಇದನ್ನು ಯಾರೂ ನಂಬಬಾರದು. ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ವೈರಲ್ ಆಗಿರೋ ಆಡಿಯೋದಲ್ಲಿ ಏನಿದೆ...!
ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್ ವಿರುದ್ಧ ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ ಪೂರಕವಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಕ್ರೋಚ್ ಪಾರ್ಟಿ ಹೆಸರಿನ ಎಕ್ಸ್ ಖಾತೆಯಲ್ಲಿ ಆಡಿಯೋ ರಿಲೀಸ್ ಆಗಿದೆ. ದಾವಣಗೆರೆಯ ಕಾಂಗ್ರೆಸ್ ಮುಖಂಡ ಸಿರಾಜ್ ಜೊತೆ ಜಮೀರ್ ಅಹಮ್ಮದ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ. ಆಡಿಯೋದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿ ಮಾತನಾಡಲಾಗಿದೆ.
ಮುಸ್ಲಿಂ ವೋಟಿಂಗ್ ಕಡಿಮೆ ಇದೆ ಹೊರಗಡೆ ಬಂದ್ರೆ ಅವರನ್ನ ನಂಬೋಕಾಗಲ್ಲ ಕಾಂಗ್ರೆಸ್‌ಗೆ ವೋಟ್ ಹಾಕುತ್ತಾರೆ. ಒತ್ತಾಯ ಮಾಡಿ ಮನೆಯಿಂದ ಕರ್ಕೊಂಡು ಬರಬೇಡಿ. ಪಕ್ಷೇತರರಿಗೆ ಎಸ್‌ಡಿಪಿಐಗೆ ವೋಟ್ ಹಾಕಲಿ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ ಎಂದು ಆಡಿಯೋದಲ್ಲಿ ಬಿಂಬಿಸಲಾಗಿದೆ.