Search


16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಜರ್ಮನಿಯಲ್ಲಿ ರೋಬೊ ಅರೆಸ್ಟ್!

ಬರ್ಲಿನ್: 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಜರ್ಮನಿಯ ಪೊಲೀಸರು ಮಾನವ ರೂಪದ ರೋಬೊವೊಂದನ್ನು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ಜರ್ಮನಿಯ ಕೊಲೊನ್ ನಗರದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ರೋಬೊ ಬಾಲಕಿಯ ಹಿಂಭಾಗವನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದೆ ಎನ್ನಲಾಗಿದ್ದು, ಈ ಕೃತ್ಯವನ್ನು ಇಬ್ಬರು ಯುವಕರು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರೋಬೊದ ಮಾಲೀಕ ಎನ್ನಲಾದ 16 ವರ್ಷದ ಬಾಲಕ ಮತ್ತು ಆತನ 19 ವರ್ಷದ ಸಹಚರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯ ವ್ಯಾಪ್ತಿಗೆ ಬಂದಿದ್ದಾರೆ. ಇಬ್ಬರೂ ಉದ್ದೇಶಪೂರ್ವಕವಾಗಿ ರೋಬೊವನ್ನು ಬಳಸಿ ಬಾಲಕಿಗೆ ಕಿರುಕುಳ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಘಟನೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ರೋಬೊದ ಚಲನವಲನಗಳನ್ನು ಮೊದಲೇ ಪ್ರೋಗ್ರಾಮ್ ಮಾಡಲಾಗಿತ್ತೇ ಅಥವಾ ದೂರದಿಂದಲೇ ನಿಯಂತ್ರಿಸಲಾಗುತ್ತಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ, ಫಾಸ್ಟ್‌ಫುಡ್ ರೆಸ್ಟೋರೆಂಟ್ ಸಮೀಪದ ಕಾರಿನ ಟ್ರಂಕ್‌ನಲ್ಲಿದ್ದ ರೋಬೊವನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ಮೊಬೈಲ್ ಫೋನ್‌ಗಳನ್ನೂ ಜಪ್ತಿ ಮಾಡಿದ್ದಾರೆ. ಇಂತಹ ಘಟನೆಯನ್ನು ಈ ಹಿಂದೆ ಕೇಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

ಸುಮಾರು 120 ಸೆಂಟಿಮೀಟರ್ ಎತ್ತರವಿರುವ ಈ ರೋಬೊ ಮಾನವನ ರೂಪವನ್ನು ಹೋಲುತ್ತದೆ. ಇದಕ್ಕೆ ಬಿಳಿ ಬಣ್ಣದ ಟಾಪ್, ಕಪ್ಪು ಪ್ಯಾಂಟ್, ಚಿನ್ನದ ಸರ ಮತ್ತು ಸನ್‌ಗ್ಲಾಸ್‌ಗಳನ್ನು ಹಾಕಲಾಗಿತ್ತು. ಅಲ್ಲದೆ, ಮುಖಕ್ಕೆ ನಕಲಿ ಮೀಸೆಯನ್ನೂ ಅಂಟಿಸಲಾಗಿತ್ತು. ಪೊಲೀಸರು ರೋಬೊದ ಚಿತ್ರವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ, ಕೊಲೊನ್ ನಗರದ ಬೀದಿಗಳಲ್ಲಿ ರೋಬೊ ಮಹಿಳೆಯರ ಬಳಿ ತೆರಳಿ ಚೇಷ್ಟೆ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಮಹಿಳೆಯರಿಗೆ ಡಿಕ್ಕಿ ಹೊಡೆಯುವುದು ಮತ್ತು ಅವರನ್ನು ಅಪ್ಪಿಕೊಳ್ಳಲು ಪ್ರಯತ್ನಿಸುವಂತಹ ದೃಶ್ಯಗಳು ವಿಡಿಯೊಗಳಲ್ಲಿ ಸೆರೆಯಾಗಿವೆ ಎನ್ನಲಾಗಿದೆ. ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ರೋಬೊವನ್ನು ವ್ಯಕ್ತಿಯೊಬ್ಬ ಹಿಂದಕ್ಕೆ ಎಳೆಯುತ್ತಿರುವ ದೃಶ್ಯವೂ ಕಂಡುಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

By Ravikumar - 15-10-2026


Ads in Post