Search


ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರತಾಪ್ ಸಿಂಹ ವಿರುದ್ಧ ಅಟ್ರಾಸಿಟಿ ಪ್ರಕರಣ

ಮೈಸೂರು: ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಪೊಲೀಸ್ ಅಧಿಕಾರಿಯೊಬ್ಬರಿಗೆ ಜಾತಿ ನಿಂದನೆ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿ. ನರಸೀಪುರ ತಾಲೂಕಿನ ಕೈಯಂಬಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಕ್ರೀಡಾ ಕಲಾ ಸಂಘದ ಅಧ್ಯಕ್ಷ ಮಧು ಕೆ.ಟಿ. ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ, ಪೊಲೀಸ್ ಠಾಣೆ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಹಾಗೂ ಮಾಧ್ಯಮಗಳ ಮುಂದೆ ಪ್ರತಾಪ್ ಸಿಂಹ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352 ಮತ್ತು 356 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಾಪ್ ಸಿಂಹ ಅವರು ದಲಿತ ಸಂಘಟನೆಗಳ ಕಾರ್ಯಕರ್ತರನ್ನು ಉದ್ದೇಶಿಸಿ ಅಂಬೇಡ್ಕರ್ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಹಾಗೂ ಶೋಷಿತರ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಗಳ ಪದಾಧಿಕಾರಿಗಳು ಹಣ ಮತ್ತು ವೈಯಕ್ತಿಕ ಲಾಭಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ, ಪರಿಶಿಷ್ಟ ಜಾತಿಗೆ ಸೇರಿದ ಧನಂಜಯ ಎಂಬ ಪೊಲೀಸ್ ಇನ್‌ಸ್ಪೆಕ್ಟರ್ ಅವರ ಜಾತಿಯನ್ನು ಉಲ್ಲೇಖಿಸಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಪಟ್ಟಣದಲ್ಲಿ ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆ ಕದಡುವ ಉದ್ದೇಶದಿಂದ ಪ್ರತಾಪ್ ಸಿಂಹ ಹಾಗೂ ಶೋಭಾಯಾತ್ರೆಯ ಆಯೋಜಕರು ಒಟ್ಟಾಗಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

By Ravikumar - 23-09-2026


Ads in Post