Search


150 ಇಸ್ರೇಲಿಗರಿಗೆ ದೇವರಾದ ಭಾರತೀಯ ಪೈಲೆಟ್; ರಕ್ತ ಸುರಿಯುತ್ತಿದ್ದರು ಸಾಹಸ ಮೆರೆದ ಕ್ಯಾಪ್ಟನ್ ಸ್ಮಿತ್

ದುಬೈ: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಆತಂಕಕಾರಿ ಘಟನೆ ನಡೆದಿದೆ. ವಿಮಾನದ ಕೋ-ಪೈಲಟ್‌ ಪತನಗೊಳಿಸಲು ಯತ್ನಿಸಿದರೆಂದು ಹೇಳಲಾಗಿದ್ದು, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಮಯಪ್ರಜ್ಞೆ ಮತ್ತು ಪ್ರಯಾಣಿಕರ ಸಹಕಾರದಿಂದ ಭಾರಿ ಅನಾಹುತ ತಪ್ಪಿದೆ. ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಭಾರತೀಯ ಮೂಲದವರಾಗಿದ್ದು, ಈ ಹಿಂದೆ ಹಲವು ವರ್ಷಗಳ ಕಾಲ ಭಾರತದ ಸ್ಪೈಸ್‌ಜೆಟ್‌ನಲ್ಲಿ ಕಾರ್ಯನಿರ್ವಹಿಸಿದ್ದರೆಂದು ವರದಿಯಾಗಿದೆ.

ವಿಮಾನ ಹಾರಾಟದಲ್ಲಿದ್ದ ವೇಳೆ ಕಾಕ್‌ಪಿಟ್‌ನಲ್ಲಿ ಇಬ್ಬರು ಪೈಲಟ್‌ಗಳ ನಡುವೆ ಘರ್ಷಣೆ ನಡೆದಿದೆ. ಕೋ-ಪೈಲಟ್ ವಿಮಾನದ ನಿಯಂತ್ರಣ ಪಡೆಯಲು ಹಾಗೂ ಅದನ್ನು ಪತನಗೊಳಿಸಲು ಪ್ರಯತ್ನಿಸಿದರೆಂದು ಹೇಳಲಾಗಿದೆ. ಈ ವೇಳೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೂ ಅವರು ವಿಮಾನದ ನಿಯಂತ್ರಣ ಕಳೆದುಕೊಳ್ಳದಂತೆ ತಡೆಯಲು ಪ್ರಯತ್ನಿಸಿದ್ದಾರೆ. ಇಸ್ರೇಲಿ ಮಾಧ್ಯಮಗಳಾದ ‘ಚಾನೆಲ್ 12’ ಮತ್ತು ‘ವೈನೆಟ್’ ವರದಿಗಳ ಪ್ರಕಾರ, ಸ್ಮಿತ್ ಮಚ್ಚಾರ್ ಭಾರತೀಯ ಮೂಲದವರು ಹಾಗೂ ಭಾರತೀಯ ಪ್ರಜೆಯಾಗಿದ್ದಾರೆ.

ಕಾಕ್‌ಪಿಟ್‌ನಿಂದ ಕಿರುಚಾಟ ಕೇಳಿಬಂದ ಬಳಿಕ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು. ಒಬ್ಬ ಪ್ರಯಾಣಿಕ ಕಾಕ್‌ಪಿಟ್ ಬಾಗಿಲು ತೆರೆದು ನೋಡಿದಾಗ ಒಳಗೆ ರಕ್ತದ ಕಲೆಗಳು ಹಾಗೂ ಗಾಯಗೊಂಡ ಪೈಲಟ್ ಕಂಡುಬಂದಿದ್ದಾರೆ. ತಕ್ಷಣವೇ ಕೆಲ ಪ್ರಯಾಣಿಕರು ಕಾಕ್‌ಪಿಟ್‌ಗೆ ಪ್ರವೇಶಿಸಿ ಕೋ-ಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪೈಲಟ್ ಕೂಡ ಕಾಕ್‌ಪಿಟ್‌ಗೆ ತೆರಳಿ ವಿಮಾನವನ್ನು ನಿಯಂತ್ರಿಸುವಲ್ಲಿ ನೆರವಾದರು. ಇಬ್ಬರು ವೈದ್ಯರು ಗಾಯಗೊಂಡ ಕ್ಯಾಪ್ಟನ್ ಹಾಗೂ ಕೋ-ಪೈಲಟ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು.

ಘಟನೆಯ ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ವಿಮಾನದಲ್ಲಿ 27 ಮಕ್ಕಳು ಸೇರಿದಂತೆ ಒಟ್ಟು 180 ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ. ಕೋ-ಪೈಲಟ್‌ನನ್ನು ಪ್ರಯಾಣಿಕರು ಹಿಡಿದುಕೊಂಡು ಕಟ್ಟಿಹಾಕಿದ್ದರು. ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ ಎಂದು ವರದಿಗಳು ಹೇಳಿವೆ.

ಈ ಘಟನೆಗೆ ಸಂಬಂಧಿಸಿದಂತೆ ಇಸ್ರೇಲಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಎನ್12ಗೆ ನೀಡಿದ ಮಾಹಿತಿಯಲ್ಲಿ ಅಧಿಕಾರಿಯೊಬ್ಬರು, ಇದು ವಿಮಾನವನ್ನು ಪತನಗೊಳಿಸುವ ಮೂಲಕ ಭಾರಿ ಅನಾಹುತ ಸೃಷ್ಟಿಸುವ ಪ್ರಯತ್ನವಾಗಿರಬಹುದು ಎಂದು ಹೇಳಿದ್ದಾರೆ. ಈ ಘಟನೆಯನ್ನು 9/11 ದಾಳಿಯ ಮಾದರಿಯ ಪ್ರಯತ್ನಕ್ಕೆ ಹೋಲಿಸಲಾಗಿದೆ ಎಂಬುದೂ ವರದಿಯಾಗಿದೆ. ಆದರೆ ತನಿಖೆ ಪೂರ್ಣಗೊಳ್ಳುವವರೆಗೆ ಘಟನೆಯ ಉದ್ದೇಶದ ಕುರಿತು ಅಂತಿಮ ನಿರ್ಧಾರಕ್ಕೆ ಬರುವುದು ಸಾಧ್ಯವಿಲ್ಲ.

ಫ್ಲೈದುಬೈ ಸಂಸ್ಥೆಯೂ FZ1073 ವಿಮಾನದಲ್ಲಿ ಘಟನೆ ನಡೆದಿರುವುದನ್ನು ದೃಢಪಡಿಸಿದ್ದು, ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದ್ದು, ಸಂಬಂಧಪಟ್ಟ ಭದ್ರತಾ ಸಂಸ್ಥೆಗಳೊಂದಿಗೆ ಸಹಕರಿಸುತ್ತಿರುವುದಾಗಿ ಸಂಸ್ಥೆ ಹೇಳಿದೆ. ಘಟನೆಯ ಬೆನ್ನಲ್ಲೇ ಇಸ್ರೇಲ್ ತನ್ನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿತು.

By Ravikumar - 30-09-2026


Ads in Post