Search


BMTC ಬಸ್‌ಗಳ ನಡುವೆ ಮತ್ತೊಂದು ಅಪಘಾತ; ಬಸ್‌ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ನರ ನಾಡಿಯಾಗಿರುವ ಬಿಎಂಟಿಸಿ ಬಸ್‌ಗಳ ಸರಣಿ ಅಪಘಾತ ಮುಂದುವರಿದಿದೆ, ನಿನ್ನೆಯಷ್ಟೇ ಕೆ.ಆರ್‌ ಸರ್ಕಲ್‌ ಬಳಿ ಎರಡು ಬಸ್‌ಗಳ ನಡುವೆ ಅಪಘಾತ ಸಂಭವಿಸಿ, ಅನೇಕ ಪ್ರಯಾಣಿಕರು ಗಾಯಗೊಂಡಿದ್ದರು, ಅದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು. ಲಗ್ಗೆರೆ ಸಮೀಪ ಎರಡು ಬಸ್‌ಗಳ ನಡುವೆ ಭೀಕರ ಡಿಕ್ಕಿಯಾಗಿದೆ, ಪರಿಣಾಮ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಲಗ್ಗೆರೆ  (Laggere ) ಸಮೀಪ, ಗೊರಗುಂಟೆಪಾಳ್ಯ ಕಡೆಗೆ ಹೋಗುವ ಮಾರ್ಗದಲ್ಲಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಡಿಕ್ಕಿಯಾಗಿದ್ದು, ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಿಎಂಟಿಸಿ ಡೀಸೆಲ್ ಬಸ್ ಮುಂದೆ ಚಲಿಸುತ್ತಿದ್ದ ಕಾರು ಚಾಲಕನೊಬ್ಬ ಹಠಾತ್ತನೆ ಬ್ರೇಕ್ ಹಾಕಿದ್ದಾನೆ. ಈ ವೇಳೆ ಬಸ್ ಚಾಲಕ ಕೂಡ ತಕ್ಷಣವೇ ಬ್ರೇಕ್ ತುಳಿದಿದ್ದಾನೆ. ಅದೇ ಸಮಯದಲ್ಲಿ ಹಿಂಬದಿಯಿಂದ ಓವರ್‌ಟೇಕ್ ಮಾಡಲು ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್, ಮುಂಭಾಗದಲ್ಲಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಸಹ ಪ್ರಯಾಣಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಗಾಯಾಳುಗಳನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಲಗ್ಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದರ ನಡುವೆ ಬಿಎಂಟಿಸಿ ಬಸ್‌ ಪ್ರಯಾಣ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದಿದೆ,. ಅದರಲ್ಲೂ ವಿದ್ಯುತ್‌ ಚಾಲಿತ ಬಸ್‌ಗಳು ನಿರಂತರವಾಗಿ ಈ ರೀತಿಯ ಅಪಘಾತಕ್ಕೆ ತುತ್ತಾಗುತ್ತಿದ್ದು, ಚಾಲಕರ ನಿರ್ಲಕ್ಷದ ಚಾಲನೆ ಬಗ್ಗೆ ಅನೇಕ ದೂರುಗಳು ದಾಖಲಾಗಿವೆ. 

ಇನ್ನು ನಿನ್ನೆ (ಜುಲೈ 04) ಅಷ್ಟೇ ಬೆಂಗಳೂರಿನ ಕೆ.ಆರ್ ಸರ್ಕಲ್ (KR Circle) ಬಳಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಬಸ್ ಚಾಲಕನ (Driver) ಸ್ಥಿತಿ ಚಿಂತಾಜನಕವಾಗಿದೆ. 13ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಯುವತಿಯೊಬ್ಬರು ಬಸ್‌ನ ಒಳಗಡೆ ಸಿಲುಕಿಕೊಂಡು ಗೋಳಾಡಿದ್ದಯ, ಗಾಯಗೊಂಡವರನ್ನು ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

By Ravikumar - 05-07-2026


Ads in Post