Search


ಪಹಾಲ್ಗಮ್ ದಾಳಿಯ ಮತ್ತೊಬ್ಬ ಉಗ್ರನಿಗೆ ಟಿಕೆಟ್ ಕೊಟ್ಟ ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರದ ಬಡ್ಗಾಂ ಜಿಲ್ಲೆಯಲ್ಲಿ ನಡೆದ ‘ಆಪರೇಷನ್ ಅಶ್ದರ್’ ಕಾರ್ಯಾಚರಣೆಯಲ್ಲಿ ಪಹಾಲ್ಗಮ್ ದಾಳಿಯ ಮತ್ತೊಬ್ಬ ಉಗ್ರನನ್ನ ಭದ್ರತಾ ಪಡೆಗಳು ಹೊಡೆದುರುಳಿಸಿವೆ, ಹತ್ಯೆಯಾದ ಉಗ್ರನನ್ನು ಯಾಸಿರ್ ಎಂದು ಗುರುತಿಸಲಾಗಿದ್ದು. ಆತ ಪಾಕಿಸ್ತಾನಿ ನಿಷೇಧಿತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಜೊತೆ ಸಂಪರ್ಕ ಹೊಂದಿದ್ದ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, “ನೀವು ಓಡಬಹುದು, ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.  ಮಾಹಿತಿಗಳ ಪ್ರಕಾರ, ಯಾಸಿರ್ ಪಹಲ್ಗಾಮ್ ದಾಳಿಯ ಪ್ರಮುಖ ಸೂತ್ರಧಾರನ ಆಪ್ತ ಸಹಚರನಾಗಿದ್ದ ಎನ್ನಲಾಗಿದೆ. ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ನಡೆಸಿದ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದರು.

ಭಾರತೀಯ ಸೇನೆ-ಪೊಲೀಸರ ಜಂಟಿ ಕಾರ್ಯಾಚರಣೆ

ಬಡ್ಗಾಂ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ. ಘಟನಾ ಸ್ಥಳದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಪುಲ್ವಾಮಾದ ಪಖರ್‌ಪೋರಾದಿಂದ ಬಡ್ಗಾಂನ ಯೂಸ್ಮಾರ್ಗ್ ಕಡೆಗೆ ಶಂಕಿತ ಉಗ್ರರ ತಂಡ ಸಂಚರಿಸುತ್ತಿರುವ ಕುರಿತು ಭದ್ರತಾ ಪಡೆಗಳಿಗೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಗುರುವಾರದಿಂದಲೇ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಖಚಿತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸಿಆರ್‌ಪಿಎಫ್ ಪಡೆಗಳು ಬಡ್ಗಾಂನ ಅಶ್ದರ್ ಗಲಿ ಪ್ರದೇಶದಲ್ಲಿ ಜಂಟಿಯಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಕಾರ್ಯಾಚರಣೆ ವೇಳೆ ಅನುಮಾನಾಸ್ಪದ ಚಟುವಟಿಕೆ ಗಮನಿಸಿದ ಭದ್ರತಾ ಪಡೆಗಳು ಉಗ್ರರಿಗೆ ಶರಣಾಗುವಂತೆ ಸೂಚಿಸಿದ್ದವು. ಆದರೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ನಡೆದ ಭೀಕರ ಚಕಮಕಿಯಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ.

ಘಟನಾ ಸ್ಥಳದಿಂದ ಒಂದು ಎಕೆ ರೈಫಲ್ ಸೇರಿದಂತೆ ಹಲವು ಯುದ್ಧೋಪಯೋಗಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಪಿರ್ ಪಂಜಾಲ್ ಪರ್ವತ ಶ್ರೇಣಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ವ್ಯಾಪಕ ಶೋಧ ಮತ್ತು ಜಾಲಾಡುವ ಕಾರ್ಯಾಚರಣೆಯನ್ನು ಮುಂದುವರಿಸಿವೆ. ಉಗ್ರರು ತಪ್ಪಿಸಿಕೊಳ್ಳದಂತೆ ಹೆಚ್ಚುವರಿ ಪಡೆಗಳನ್ನು ಪ್ರದೇಶಕ್ಕೆ ನಿಯೋಜಿಸಲಾಗಿದ್ದು, ಭದ್ರತಾ ವಲಯವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

By Ravikumar - 05-09-2026


Ads in Post