Search


ಸೌಜನ್ಯ ಅತ್ಯಾಚಾರ ಪ್ರಕರಣದ ಮರು ತನಿಖೆಗೆ ಶೀಘ್ರದಲ್ಲೇ ಸಿಗಲಿದೆ ಉತ್ತರ; ಸುಪ್ರೀಂನಲ್ಲಿ ಮಹತ್ವದ ವಿಚಾರಣೆ

ನವದೆಹಲಿ : 2012ರ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆ ನಡೆಸುವಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ಸುಪ್ರೀಂ ಕೋರ್ಟ್, ತನ್ನ ತೀರ್ಪನ್ನು ಕಾಯ್ದಿರಿಸಿದೆ. ವಿಚಾರಣೆ ವೇಳೆ ತನಿಖೆ ನಡೆಸಿದ ಸಿಬಿಐ ಕಾರ್ಯವೈಖರಿಯ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. 

ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಸಂಜೀವ್ ಸಚ್‌ದೇವಾ ಅವರಿದ್ದ ಪೀಠವು, ಸಿಬಿಐ ಸ್ವತಂತ್ರವಾಗಿ ತನಿಖೆ ನಡೆಸಿದೆಯೇ ಎಂಬ ಪ್ರಶ್ನೆಯನ್ನು ಎತ್ತಿತು. ಹಿಂದಿನ ತನಿಖೆಗಳಲ್ಲಿದ್ದ ದಾಖಲೆಗಳನ್ನೇ ಅವಲಂಬಿಸಿರುವುದು, ತನಿಖಾಧಿಕಾರಿ ಅಪರಾಧ ಸ್ಥಳಕ್ಕೆ ಭೇಟಿ ನೀಡದಿರುವುದು ಹಾಗೂ ಸೌಜನ್ಯ ಅವರ ತಾಯಿಯ ಹೇಳಿಕೆಯನ್ನು ದಾಖಲಿಸದಿರುವುದು ಸೇರಿದಂತೆ ಹಲವು ಲೋಪಗಳನ್ನು ಕೋರ್ಟ್ ಉಲ್ಲೇಖಿಸಿತು. 

ಸೌಜನ್ಯ ಅವರ ತಾಯಿ ಸಲ್ಲಿಸಿರುವ ಅರ್ಜಿಯಲ್ಲಿ, ರಾಜ್ಯ ಪೊಲೀಸ್, ಸಿಐಡಿ ಮತ್ತು ಸಿಬಿಐ ತನಿಖೆಗಳಲ್ಲಿ ಗಂಭೀರ ದೋಷಗಳಿದ್ದು, ಪ್ರಕರಣವನ್ನು ಹೊಸ ವಿಶೇಷ ತನಿಖಾ ತಂಡ (SIT) ಮೂಲಕ ಮರುತನಿಖೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ. ವಿಚಾರಣೆ ವೇಳೆ ಕರ್ನಾಟಕ ಸರ್ಕಾರವೂ ಅಗತ್ಯವಿದ್ದರೆ ಹೊಸ ತನಿಖೆಗೆ ಸಿದ್ಧವಿರುವುದಾಗಿ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರ ತನಿಖೆ ನಡೆಸಲು ಮುಂದಾದರೆ ಅದರ ಉದ್ದೇಶವನ್ನು ಅನುಮಾನಿಸುವ ಅಗತ್ಯವಿಲ್ಲ ಎಂದು ಹೇಳಿ, ಅಂತಿಮ ಆದೇಶವನ್ನು ಕಾಯ್ದಿರಿಸಿದೆ.

By Ravikumar - 22-07-2026


Ads in Post