Search


ನಕಲು ಮಾಡುತ್ತ ಸಿಕ್ಕಿ ಬಿದ್ದಿದ್ದ ವಿದ್ಯಾರ್ಥಿ ಅತ್ಮಹತ್ಯೆ, ಡೀನ್ ಅಮಾನತು; ಹಾಸ್ಟೆಲ್‌ಗಳಲ್ಲಿ ಸೀಲಿಂಗ್ ಫ್ಯಾನ್ ತೆರವು

ಮುಂಬೈ: ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ರವೀಂದ್ರ ವಕೋಡ್ (22) ಆತ್ಮಹತ್ಯೆ ಮಾಡಿಕೊಂಡ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಕುಟುಂಬಸ್ಥರ ದೂರಿನ ಬೆನ್ನಲ್ಲೇ ಡೀನ್ ಪ್ರೊಫೆಸರ್ ಸೂರ್ಯನಾರಾಯಣ್ ದುಲ್ಲಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ವಿದ್ಯಾರ್ಥಿಯ ಸಾವಿನ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಐಐಟಿ ಬಾಂಬೆ ಆಡಳಿತವು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.

ಮಹಾರಾಷ್ಟ್ರದ ಯವತ್ಮಾಳ್ ಮೂಲದ ಸಾಹಿಲ್ ಎನರ್ಜಿ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರ ನಡೆದ ಮಿಡ್-ಸೆಮಿಸ್ಟರ್ ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ಪ್ರಶ್ನೆಪತ್ರಿಕೆಯನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ ನಕಲು ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪರೀಕ್ಷೆ ಮುಗಿದ ಕೆಲವೇ ಗಂಟೆಗಳ ಬಳಿಕ ಪೊವೈ ಕ್ಯಾಂಪಸ್‌ನ ಹಾಸ್ಟೆಲ್ ಕೊಠಡಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಹಿಲ್ ಕ್ಯಾಂಪಸ್‌ನಲ್ಲಿ ಸಾಂಸ್ಥಿಕ ಕಿರುಕುಳ ಹಾಗೂ ಜಾತಿ ಆಧಾರಿತ ತಾರತಮ್ಯ ಎದುರಿಸುತ್ತಿದ್ದರು ಎಂದು ಅವರ ಕುಟುಂಬ ಮತ್ತು ಸಹಪಾಠಿಗಳು ಆರೋಪಿಸಿದ್ದಾರೆ. ಪೋಷಕರ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಪ್ರೊ. ದುಲ್ಲಾ ಸೇರಿದಂತೆ ಇತರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ವಹಿಸಲಾಗಿದೆ.

ಘಟನೆಯನ್ನು ಖಂಡಿಸಿ ನೂರಾರು ವಿದ್ಯಾರ್ಥಿಗಳು ಐಐಟಿ ಬಾಂಬೆಯ ಮುಖ್ಯ ದ್ವಾರದ ಬಳಿ ಮಧ್ಯರಾತ್ರಿವರೆಗೂ ಪ್ರತಿಭಟನೆ ನಡೆಸಿದರು. ಬಳಿಕ ನಿರ್ದೇಶಕ ಪ್ರೊ. ಶಿರೀಶ್ ಕೇದಾರೆ ಸ್ಥಳಕ್ಕೆ ತೆರಳಿ ಮೂರು ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ನಿಷ್ಪಕ್ಷಪಾತ ತನಿಖೆ, ಪರಿಹಾರ ಹಾಗೂ ನಿಯಮಾವಳಿಗಳಲ್ಲಿ ಬದಲಾವಣೆ ಸೇರಿದಂತೆ ವಿದ್ಯಾರ್ಥಿಗಳು ಮುಂದಿಟ್ಟಿದ್ದ 18 ಬೇಡಿಕೆಗಳ ಚಾರ್ಟರ್‌ಗೆ ಆಡಳಿತ ಸಮ್ಮತಿ ಸೂಚಿಸಿ ಸಹಿ ಹಾಕಿದೆ.

ಇದೇ ವೇಳೆ, ತನಿಖೆ ಪೂರ್ಣಗೊಳ್ಳುವ ಮುನ್ನವೇ ವಿದ್ಯಾರ್ಥಿಯ ಸಾವಿನ ಕಾರಣದ ಕುರಿತು ನಿರ್ದಿಷ್ಟ ಹೇಳಿಕೆ ನೀಡುವುದು ಸರಿಯಲ್ಲ ಎಂದು ಐಐಟಿ ಬಾಂಬೆ ಸ್ಪಷ್ಟಪಡಿಸಿದೆ. ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ಕ್ಷಮೆಯಾಚಿಸಿರುವ ಸಂಸ್ಥೆ, ನಿರ್ದೇಶಕ ಶಿರೀಶ್ ಕೇದಾರೆ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳು ಕೇವಲ ವದಂತಿ ಎಂದು ತಿಳಿಸಿದೆ. ಆತ್ಮಹತ್ಯೆ ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿ ಹಾಸ್ಟೆಲ್‌ಗಳಲ್ಲಿರುವ ಸಾಂಪ್ರದಾಯಿಕ ಸೀಲಿಂಗ್ ಫ್ಯಾನ್‌ಗಳನ್ನು ತೆರವುಗೊಳಿಸಿ ಗೋಡೆಗೆ ಅಳವಡಿಸುವ ಫ್ಯಾನ್‌ಗಳನ್ನು ಅಳವಡಿಸಲು ಸಂಸ್ಥೆ ನಿರ್ಧರಿಸಿದೆ.

ಇದು ಈ ವರ್ಷ ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ವರದಿಯಾದ ಮೂರನೇ ಆತ್ಮಹತ್ಯೆ ಪ್ರಕರಣವಾಗಿದೆ. ಮತ್ತೊಂದೆಡೆ, ಡೀನ್ ಅಮಾನತುಗೊಂಡಿರುವುದಕ್ಕೆ ಅಧ್ಯಾಪಕರ ಒಕ್ಕೂಟ ಪ್ರತಿಕ್ರಿಯಿಸಿದ್ದು, ಪ್ರಾಧ್ಯಾಪಕರು ಸೆನೆಟ್ ರೂಪಿಸಿರುವ ಪರೀಕ್ಷಾ ನಿಯಮಗಳ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದೆ. ವಿದ್ಯಾರ್ಥಿಗಳಿಗೆ ಎದುರಾಗುತ್ತಿರುವ ಶೈಕ್ಷಣಿಕ ಒತ್ತಡ, ಸ್ಪರ್ಧಾತ್ಮಕ ವಾತಾವರಣ ಹಾಗೂ ತಾರತಮ್ಯದ ದೂರುಗಳ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೌನ್ಸೆಲಿಂಗ್ ಮತ್ತು ವಿದ್ಯಾರ್ಥಿ ಬೆಂಬಲ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯದ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

By Ravikumar - 21-09-2026


Ads in Post