Search


ಬಿಎಂಟಿಸಿಯಲ್ಲಿ ಬೈರತಿ ಸುರೇಶ್ ರಿಯಾಲಿಟಿ ಚೆಕ್; ಚಿಲ್ಲರೆ ಇಲ್ಲ ಎಂದು ಬಸ್ನಿಂದ ಇಳಿಸಿದ ಕಂಡಕ್ಟರ್

ಬೆಂಗಳೂರು: ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಬಿಎಂಟಿಸಿ ಬಸ್ ಗಳಲ್ಲಿ ದಿಢೀರ್ ಪ್ರಯಾಣಿಸಿ ರಿಯಾಲಿಟಿ ಚೆಕ್ ನಡೆಸಿದರು. ರಾತ್ರಿ 7.10 ಯಿಂದ 9.10 ರವರೆಗೆ ಜಯಮಹಲ್ ನಿಂದ ಟಿವಿ ಟವರ್, ಟಿವಿ ಟವರ್ ನಿಂದ ಆರ್ ಟಿ ನಗರ, ಆರ್ ಟಿ ನಗರದಿಂದ ಸಿಬಿಐ ರಸ್ತೆ, ಸಿಬಿಐ ಜಂಕ್ಷನ್ ನಿಂದ ಮುಂದಿನ ನಿಲ್ದಾಣ, ಸಿಬಿಐ ಸ್ಟಾಪ್ ನಿಂದ ಮಸೀದಿ ಸ್ಟಾಪ್ ನಿಂದ ಬಳ್ಳಾರಿ ಮುಖ್ಯರಸ್ತೆ, ಅಲ್ಲಿಂದ ಆಟೋದಲ್ಲಿ ಹೆಬ್ಬಾಳಕ್ಕೆ, ಹೆಬ್ಬಾಳದಿಂದ ಭೂಪಸಂದ್ರ, ಹೆಬ್ಬಾಳ ರಿಂಗ್ ರಸ್ತೆಯಿಂದ ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ಸೇರಿದಂತೆ ಹಲವು ಕಡೇ 10ಕ್ಕೂ ಹೆಚ್ಚು ಬಸ್ ಗಳಲ್ಲಿ ಪ್ರಯಾಣ ಮಾಡಿ, ಬಿಎಂಟಿಸಿ ವ್ಯವಸ್ಥೆಯನ್ನು ಕಣ್ಣಾರೆ ಕಂಡು ಪರಿಶೀಲಿಸಿದರು.

ಮಾಸ್ಕ್ ಹಾಕಿ ಪ್ರಯಾಣ ಮಾಡಿದ್ದರಿಂದ ಬಸ್ ನಲ್ಲಿದ್ದ ಪ್ರಯಾಣಿಕರಿಗಾಗಲೀ ಅಥವಾ ಚಾಲಕ, ಕಂಡಕ್ಟರ್ ಗೆ ಆಗಲೀ ಇವರು ಸಚಿವರು ಎಂಬುದು ಗಮನಕ್ಕೆ ಬರಲಿಲ್ಲ. ಪ್ರತಿಯೊಂದು ಬಸ್ ಗೂ ನಿಗದಿತ ಹಣ ನೀಡಿ ಪ್ರಯಾಣಿಸಿದ ಸಚಿವರು, ಕೆಲವು ಪ್ರಯಾಣಿಕರೊಂದಿಗೆ ಬಸ್ ಸಂಚಾರದ ಬಗ್ಗೆ ವಿಚಾರಿಸಿದರು.

ಚಾಲಕ, ಕಂಡಕ್ಟರ್ ಅಮಾನತಿಗೆ ಸೂಚನೆ

ಜಯಮಹಲ್ ನಿಂದ ಸಾಗುತ್ತಿದ್ದ ಕೆಎ 57 ಎಫ್ 3372 ಸಂಖ್ಯೆಯ ಬಸ್ ಫನ್ ವರ್ಲ್ಡ್ ನಲ್ಲಿ ಸ್ಟಾಪ್ ನಲ್ಲಿ ಪ್ರಯಾಣಿಕರೊಬ್ಬರು ಕೈ ತೋರಿಸಿದರೂ ನಿಲುಗಡೆ ಮಾಡಲಿಲ್ಲ. ಹಿಂದಿನ ಬಸ್ ನಲ್ಲಿದ್ದ ಸಚಿವ ಬೈರತಿ ಸುರೇಶ್ ಅವರು, ಸದರಿ ಬಸ್ ನ ಕಂಡಕ್ಟರ್ ದಯಾನಂದ್ ಮತ್ತು ಚಾಲಕ ಮುಸ್ತಾಕ್ ಅವರನ್ನು ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್

ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ಹೋಗುವ ಬಸ್ ಹತ್ತಿದ ಸಚಿವ ಬೈರತಿ ಸುರೇಶ್ ಅವರು ಬಸ್ ಸಂಚಾರ ಮಾಡುವಾಗ ಎರಡು ಟಿಕೆಟ್ ನೀಡುವಂತೆ ಕೇಳಿ, 100 ರೂಪಾಯಿ ನೋಟನ್ನು ನೀಡಿದರು. ಆಗ ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿದರು. ಇದಕ್ಕೆ ಪ್ರತಿಯಾಗಿ ಸಚಿವರು ಚಿಲ್ಲರೆ ಇಲ್ಲ ಎಂದಿದ್ದಕ್ಕೆ, ತನ್ನ ಬಳಿ ಚಿಲ್ಲರೆ ಇಲ್ಲದಿರುವುದನ್ನು ಬ್ಯಾಗ್ ತೋರಿಸಿ ಹೇಳಿದ ಕಂಡಕ್ಟರ್, ಚಿಲ್ಲರೆ ಇಲ್ಲದಿದ್ದರೆ ಕೆಳಗೆ ಇಳಿಯುವಂತೆ ಸಚಿವರಿಗೆ ಸೂಚಿಸಿದ. ಇದಕ್ಕೆ ಮರುಮಾತಾನಾಡದೇ ಸಚಿವರು ಕೆಳಗಿಳಿದರು.

By Ravikumar - 12-07-2026


Ads in Post