ರಾಮನಗರ : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಎಚ್.ಸಿ. ಬಾಲಕೃಷ್ಣ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಕುಮಾರಸ್ವಾಮಿ ಅವರು ಸ್ವತಃ ತಮ್ಮ ಧರ್ಮಪತ್ನಿ ಹಾಗೂ ಪಿಎಗಳ ಫೋನ್‌ಗಳನ್ನು ಟ್ಯಾಪ್ ಮಾಡಿಸಿದ ಆರೋಪ ಎದುರಿಸಿದ್ದಾರೆ. ಇಂತಹವರು ತಮ್ಮ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಾಲಕೃಷ್ಣ ಕಿಡಿಕಾರಿದರು. “ನಿನಗೆ ನಿನ್ನ ಹೆಂಡತಿ ಮೇಲೆ ನಂಬಿಕೆ ಇಲ್ಲ. ಇನ್ನೂ ಸಮಾಜವನ್ನು ಹೇಗೆ ನಂಬುತ್ತೀರಿ?” ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಗನ್ ವಿಚಾರವಾಗಿ ಮಾತನಾಡಿದ ಬಾಲಕೃಷ್ಣ, “ಯಾವ ಗನ್ ತರಬೇಕೋ ಅದನ್ನು ತರಲಿ. ಒಂದು ನನಗೆ ಶೂಟ್ ಮಾಡಲಿ, ಇಲ್ಲವೇ ಅವರೇ ಶೂಟ್ ಮಾಡಿಕೊಳ್ಳಲಿ. ಸುಮ್ಮನೆ ಹಿಟ್ ಅಂಡ್ ರನ್ ರೀತಿಯ ಆರೋಪ ಹಾಗೂ ಉಡಾಫೆ ಮಾತು ನಡೆಯುವುದಿಲ್ಲ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನನ್ನ ಬಳಿ ಗನ್ ಇಲ್ಲ, ಲೈಸೆನ್ಸ್ ಕೂಡ ಇಲ್ಲ. ಇಂತಹ ಆರೋಪ ಮಾಡುವ ಮೊದಲು ಸತ್ಯಾಂಶ ತಿಳಿದುಕೊಳ್ಳಬೇಕು. ಆರೋಪವನ್ನು ಸಾಬೀತುಪಡಿಸಿ, ಇಲ್ಲವೇ ಕ್ಷಮೆ ಕೇಳಿ” ಎಂದು ಅವರು ಆಗ್ರಹಿಸಿದರು.
ತಮ್ಮ ವಿರುದ್ಧ ಗನ್ ತೋರಿಸಿದ ಆರೋಪ ಮಾಡಿರುವ ಕುಮಾರಸ್ವಾಮಿ ವಿರುದ್ಧವೂ ಹರಿಹಾಯ್ದ ಬಾಲಕೃಷ್ಣ, ತಮ್ಮ ರಾಜಕೀಯ ಜೀವನದಲ್ಲಿ ಗನ್ ಅಥವಾ ಕತ್ತಿ ತೋರಿಸುವಂತಹ ರಾಜಕೀಯ ಮಾಡಿಲ್ಲ ಎಂದರು. “ನಮ್ಮ ಸ್ವಾಮೀಜಿ ಮೇಲೆ ಫೋನ್ ಟ್ಯಾಪಿಂಗ್ ಮಾಡಿಸಿದವರು ಇವರೇ. ಅಂತಹ ಮನಸ್ಥಿತಿ ಹೊಂದಿರುವವರು ಸಮಾಜಕ್ಕೆ ಬುದ್ಧಿ ಹೇಳುತ್ತಿದ್ದಾರೆ” ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರನ್ನು ಮಾಜಿ ನಾಯಕರು ಎಂಬ ಕಾರಣಕ್ಕೆ ಗೌರವಿಸುತ್ತಿರುವುದಾಗಿ ಹೇಳಿದ ಬಾಲಕೃಷ್ಣ, ತಾವು ಯಾರಿಗೂ ಹೆದರುವುದಿಲ್ಲ ಎಂದರು. “ನನಗೆ ಕೋಪ ಬಂದರೆ ಯಾರನ್ನೂ ಕೇರ್ ಮಾಡುವುದಿಲ್ಲ. ನಾನೇನು ಸತ್ಯ ಹರಿಶ್ಚಂದ್ರನಲ್ಲ. ಸಣ್ಣಪುಟ್ಟ ತಪ್ಪುಗಳನ್ನು ಮಾಡಿರಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ ಗೌರವಯುತವಾಗಿ ನಡೆದುಕೊಂಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.