ಬೆಂಗಳೂರು : ತನ್ನನ್ನು ತಾನು ಪಿಎಚ್ಡಿ ಪದವೀಧರ ಎಂದು ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಸುಳ್ಳು ಪ್ರೋಪೈಲ್ ಸೃಷ್ಟಿಸಿ 10ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಮತ್ತು ಮೈಸೂರು ಮೂಲದ ಯುವತಿಯರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದು, ದೂರು ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದಾನೆ.
ಮಗನ ಜೊತೆ ಕೈಜೋಡಿಸಿದ ಅಮ್ಮ...!
ಆರೋಪಿ ಪ್ರದೀಪ್ ಸೋಲೋಮನ್ ಎಂಬಾತ ಮ್ಯಾಟ್ರಿಮೋನಿಯಲ್ ಸೈಟ್ಗಳಲ್ಲಿ ‘ಡಾ. ಪ್ರದೀಪ್ ಸೋಲೋಮನ್’ ಹೆಸರಿನಲ್ಲಿ ಹೈ-ಫೈ ಪ್ರೊಫೈಲ್ ತೆರೆದಿದ್ದನು. ಮಗನ ಈ ವಂಚನೆ ಆಟಕ್ಕೆ ತಾಯಿ ಕಲಾವತಿ ಕೂಡ ಸಂಪೂರ್ಣ ಸಾತ್ ನೀಡಿದ್ದಳು. ಇವರಿಬ್ಬರು ಮೈಸೂರಿನಲ್ಲಿ ದೊಡ್ಡದೊಂದು ಐಷಾರಾಮಿ ಬಂಗಲೆಯನ್ನು ಬಾಡಿಗೆಗೆ ಪಡೆದು, ತಾವು ದೊಡ್ಡ ಶ್ರೀಮಂತರು ಎಂಬಂತೆ ಸಮಾಜದಲ್ಲಿ ಬಿಲ್ಡಪ್ ಕೊಡುತ್ತಿದ್ದರು. ಈ ಬಂಗಲೆ ಮತ್ತು ಅವರ ಲೈಫ್ಸ್ಟೈಲ್ ನೋಡಿ ಮದುವೆ ಸಂಬಂಧ ಬೆಳೆಸಲು ಮುಂದೆ ಬರುವ ವಧುವಿನ ಕುಟುಂಬಸ್ಥರನ್ನು ತಮ್ಮ ಬಣ್ಣದ ಮಾತುಗಳ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು.
ಯುವತಿಯರ ಕುಟುಂಬದ ನಂಬಿಕೆ ಗಳಿಸಿದ ನಂತರ, “ನನ್ನ ದೊಡ್ಡ ಮೊತ್ತದ ಹಣ ತಾಂತ್ರಿಕ ಕಾರಣಗಳಿಂದ ಬ್ಯಾಂಕ್ನಲ್ಲಿ ಸ್ಟ್ರಕ್ (Stuck) ಆಗಿದೆ, ಇನ್ನು ಕೆಲವೇ ದಿನಗಳಲ್ಲಿ ಹಣ ವಾಪಸ್ ಬರುತ್ತದೆ, ಸದ್ಯಕ್ಕೆ ಅರ್ಜೆಂಟ್ ಇದೆ” ಎಂದು ಹೇಳಿ ಲಕ್ಷ ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದನು. ಪ್ರದೀಪನ ಮಾತು ನಂಬಿ ಇತ್ತೀಚೆಗೆ ಬೆಂಗಳೂರು ಮೂಲದ ಶ್ರೀಮಂತ ಕುಟುಂಬವೊಂದು ಲಕ್ಷಾಂತರ ರೂಪಾಯಿ ಹಣ ನೀಡಿ ವಂಚನೆಗೊಳಗಾಗಿದೆ. ಹಣ ಕೈ ಸೇರಿದ ಬೆನ್ನಲ್ಲೇ ಅಮ್ಮ-ಮಗ ಇಬ್ಬರೂ ನಾಪತ್ತೆಯಾಗಿದ್ದಾರೆ.
ಪ್ರದೀಪ್ ಕೈಯಲ್ಲಿ ಮೋಸ ಹೋದ ಮೈಸೂರು ಮತ್ತು ಬೆಂಗಳೂರಿನ ಹಲವು ಯುವತಿಯರು ಹಾಗೂ ಅವರ ಕುಟುಂಬಸ್ಥರು ಈಗ ಮೈಸೂರಿನ ಆ ಬಂಗಲೆಯ ಮುಂದೆ ಬಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಇತ್ತ ಅಡುಗೋಡಿ ಪೊಲೀಸರು ಕಳೆದ ಎರಡು ದಿನಗಳಿಂದ ವಂಚಕ ಅಮ್ಮ-ಮಗನಿಗಾಗಿ ತೀವ್ರ ಶೋಧ ಕಾರ್ಯ (ತಲಾಶ್) ನಡೆಸುತ್ತಿದ್ದಾರೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಈ ಖತರ್ನಾಕ್ ಜೋಡಿಯ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.