ಬೆಂಗಳೂರು: ಬಿಡದಿ ಪ್ರದೇಶದಲ್ಲಿ ಭೂಸ್ವಾಧೀನ ಮತ್ತು ಸರ್ವೆ ವಿಚಾರವಾಗಿ ಉಂಟಾದ ಗಲಾಟೆ ಹಿನ್ನೆಲೆಯಲ್ಲಿ ರೈತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂಬ ಆರೋಪಕ್ಕೆ ಶಾಸಕ ಮಾಗಡಿ ಬಾಲಕೃಷ್ಣ ಸ್ಪಷ್ಟನೆ ನೀಡಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಮಾತ್ರ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ನಿರಪರಾಧ ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿಲ್ಲ ಎಂದು ಅವರು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಯಾರು ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಅವರ ವಿರುದ್ಧವೇ ಎಫ್ಐಆರ್ ದಾಖಲಾಗಿದೆ. ರೈತರು ಕಲ್ಲು ತೂರುವುದು, ಪೊರಕೆಯಿಂದ ಹೊಡೆಯುವುದು ಸರಿಯಲ್ಲ. ಹಲ್ಲೆ ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ನಮ್ಮ ಯಾವುದೇ ಸೂಚನೆ ಅಥವಾ ಹಸ್ತಕ್ಷೇಪ ಇಲ್ಲ," ಎಂದು ಹೇಳಿದರು. ಈ ಸಂದರ್ಭದಲ್ಲಿ ತಮ್ಮ ಮೇಲೂ ಹಿಂದೆ ಸರ್ಕಾರಿ ಅಧಿಕಾರಿಯೊಂದಿಗೆ ಗದ್ದಲ ನಡೆದ ಪ್ರಕರಣದಲ್ಲಿ ಕೇಸ್ ದಾಖಲಾಗಿತ್ತು ಎಂದು ಉದಾಹರಣೆ ನೀಡಿದ ಬಾಲಕೃಷ್ಣ, ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕು ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬಿಡದಿ ವಿಚಾರವಾಗಿ ಬರೆದಿರುವ ಪತ್ರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, "ಅವರಿಗೆ ಮಾತನಾಡಲು ಇನ್ನೂ ಅನೇಕ ಜ್ವಲಂತ ಸಮಸ್ಯೆಗಳಿವೆ. ಮೊದಲು ಮೇಕೆದಾಟು, ಮಹದಾಯಿ ಸೇರಿದಂತೆ ರಾಜ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಲಿ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅವರಿಗೆ ಉತ್ತಮ ಸಂಬಂಧವಿದೆ. ಆ ವಿಷಯಗಳನ್ನು ಅವರ ಮೂಲಕ ಬಗೆಹರಿಸಲು ಪ್ರಯತ್ನಿಸಲಿ," ಎಂದು ಟೀಕಿಸಿದರು.
ಹಾಸನದಲ್ಲಿ ಐಐಟಿ ಸ್ಥಾಪನೆಗೆ ಸಂಬಂಧಿಸಿದ ಭೂಸ್ವಾಧೀನ ವಿಚಾರವನ್ನು ಉಲ್ಲೇಖಿಸಿದ ಅವರು, "ಅಲ್ಲಿ ಸುಮಾರು 2,000 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಾಗಲೂ ರೈತರೇ ಇದ್ದರು. ಆಗ ದೇವೇಗೌಡರು ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ? ಹಾಸನಕ್ಕೆ ಒಂದು ನ್ಯಾಯ, ಬಿಡದಿಗೆ ಇನ್ನೊಂದು ನ್ಯಾಯವೇ?" ಎಂದು ಪ್ರಶ್ನಿಸಿದರು.
ಇದೇ ವೇಳೆ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಬಾಲಕೃಷ್ಣ, "ದೇವೇಗೌಡರು ಪುತ್ರ ವ್ಯಾಮೋಹದಿಂದ ಹೊರಬರಬೇಕು. ಮಗ ಮತ್ತು ಮೊಮ್ಮಗನಿಗಾಗಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಈ ರೀತಿಯ ರಾಜಕೀಯ ಷಡ್ಯಂತ್ರವನ್ನು ಅವರು ಈ ಹಿಂದೆಯೂ ಮಾಡಿದ್ದಾರೆ. ಎಸ್.ಎಂ. ಕೃಷ್ಣ ಅವರ ಕಾಲದಲ್ಲೂ ಇದೇ ರೀತಿಯ ರಾಜಕೀಯ ಮಾಡಿದ್ದರು. ಈಗ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಕಪ್ಪು ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ," ಎಂದು ಆರೋಪಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, "ಕುಮಾರಸ್ವಾಮಿ ಅವರು ಪೊರಕೆ ಅಥವಾ ಚಪ್ಪಲಿ ಹಿಡಿದುಕೊಂಡು ಬಂದು ಪ್ರತಿಭಟನೆ ನಡೆಸಿದ್ದರೂ ಅವರ ಮೇಲೂ ಕಾನೂನು ಪ್ರಕಾರ ಕ್ರಮವಾಗುತ್ತಿತ್ತು. ಬಿಡದಿ ಪ್ರಕರಣವನ್ನು ಸರ್ಕಾರ ಯಾವುದೇ ರೀತಿಯಲ್ಲಿ ಸಂಕೀರ್ಣಗೊಳಿಸುತ್ತಿಲ್ಲ. ಅಗತ್ಯವಿದ್ದರೆ ಸ್ಯಾಟಲೈಟ್ ಸರ್ವೆ ಮೂಲಕವೂ ಭೂಮಾಪನ ಮಾಡಬಹುದು. ಸ್ಥಳಕ್ಕೆ ತೆರಳಿಯೇ ಸರ್ವೆ ನಡೆಸಬೇಕು ಎಂಬ ನಿಯಮವಿಲ್ಲ," ಎಂದರು.
ಮುಖ್ಯಮಂತ್ರಿ ಈಗಾಗಲೇ ಸಭೆ ಕರೆದಿದ್ದು, ಅವರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ ಅವರು, "ಮುಂದೆ ಹೋದರೆ ದೌರ್ಜನ್ಯ ಎನ್ನುತ್ತೀರಿ, ಹಿಂದೆ ಬಂದರೆ ಹೆದರಿಕೊಂಡರು ಎನ್ನುತ್ತೀರಿ. ಈ ಪರಿಸ್ಥಿತಿಯಲ್ಲಿ ಮಾಧ್ಯಮಗಳಿಗೂ ನಾವು ಹೆದರಿಕೊಳ್ಳುವಂತಾಗಿದೆ," ಎಂದು ತಮ್ಮ ಹೇಳಿಕೆಯನ್ನು ಮುಕ್ತಾಯಗೊಳಿಸಿದರು.