Search


ಯುಪಿಯಲ್ಲಿ ರಣಕಹಳೆ ಮೊಳಗಿಸಿದ ರಾಗಾ; ಪ್ರಧಾನಿ ಪಟ್ಟಕ್ಕೇರಲು ರಾಹುಲ್‌ಗೆ ಬಿಗ್‌ ಚಾನ್ಸ್‌..?

ರಾಯ್‌ಬರೇಲಿ : ಸತತ ಸೋಲುಗಳಿಂದ ಕಂಗೆಟ್ಟಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಮುಂಬರುವ ಉತ್ತರ ಪ್ರದೇಶ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಈಗಾಗಲೇ 99 ಚುನಾವಣೆಗಳಲ್ಲಿ ಸೋಲು ಕಂಡಿರುವ ರಾಹುಲ್‌, ಶತಾಯ ಗತಾಯ ಮುಂಬರುವ 2027ರ ಚುನಾವಣೆಯಲ್ಲಿ ಕಮ್‌ಬ್ಯಾಕ್‌ ಮಾಡಲು ಸಿದ್ದರಾಗಿದ್ದಾರೆ, ಹಾಗಾದರೆ ರಾಹುಲ್‌ ಆರಂಭಿಸಿರುವ ತಯಾರಿ ಯಾವುದು, ಅದಕ್ಕೆ ಪೂರಕವಾಗಿ ಸಹಾಯ ಮಾಡುತ್ತಿರುವ ಅಂಶಗಳೇನು ಎಂಬುದನ್ನ ನೋಡೋಣ ಬನ್ನಿ. 


ಕೆಲ ದಿನಗಳ ಹಿಂದಷ್ಟೇ ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು. ಈ ಚುನಾವಣೆಯಲ್ಲೂ ಬಿಜೆಪಿ ತನ್ನ ಗೆಲುವಿನ ನಾಗಲೋಟ ಮುಂದುವರಿಸಿದೆ, ಕೇರಳದಲ್ಲಿ ಯುಡಿಎಫ್‌ ಬಿಟ್ಟರೆ ಬೇರೆ ಕಡೆ ಇಂಡಿ ಮೈತ್ರಿ ಕೂಟ ಅಧಿಕಾರಕ್ಕೆ ಬರಲು ವಿಫಲವಾಗಿವೆ. ಈ ಚುನಾವಣಾ ಫಲಿತಾಂಶವನ್ನ ಅನೇಕ ರಾಜಕೀಯ ವಿಶ್ಲೇಷಕರು, ವಿವಿಧ ರೀತಿಯಲ್ಲಿ ಬಣ್ಣಿಸುತ್ತಿದ್ದು, ದೇಶ ವಿಪಕ್ಷ ಮುಕ್ತವಾಗುತ್ತಿದೆ, ದೇಶದಲ್ಲಿ ವಿಪಕ್ಷಗಳು ಅಸ್ಥಿತ್ವ ಕಳೆದುಕೊಳ್ಳುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ವಿಶ್ಲೇಷಕರು ಅನೇಕ ಕಾರಣಗಳನ್ನ ನೀಡುತ್ತಿದ್ದು. ಪ್ರಮುಖವಾಗಿ ದೇಶದ ಪ್ರಮುಖ ವಿಪಕ್ಷ ಕಾಂಗ್ರೆಸ್‌ ಚುನಾವಣೆಗಳನ್ನ ಎದುರಿಸುತ್ತಿರುವ ರೀತಿಯೇ ಇದಕ್ಕೆಲ್ಲಾ ಕಾರಣ ಎಂಬ ಟೀಕೆಗಳು ಕೂಡ ಕೇಳಿ ಬರುತ್ತಿವೆ. ಇದರ ನಡುವೆ ರಾಹುಲ್‌ ತಮ್ಮ ಸೋಲಿನ ಹತಾಶೆಯನ್ನ ಬದಿಗೆ ಸರಿಸಿ ಗೆಲುವಿನ ಹುಡುಕಾಟ ಆರಂಭಿಸಿದ್ದಾರೆ.

2027ರ ಉತ್ತರ ಪ್ರದೇಶ ಚುನಾವಣೆಗೆ ರಣಕಹಳೆ ಮೊಳಗಿಸಿದ್ರಾ ರಾಹುಲ್‌...!

ದೇಶದಲ್ಲಿ ಅತಿದೊಡ್ಡ ರಾಜ್ಯವೆನಿರುವ ಉತ್ತರ ಪ್ರದೇಶ, ರಾಜಕೀಯವಾಗಿ ಬಹಳಷ್ಟು ಮಹತ್ವ ಪಡೆದಿದೆ, ಒಟ್ಟು 403 ವಿಧಾನ ಸಭಾ ಸ್ಥಾನಗಳು ಮತ್ತು 80 ಲೋಕಸಭಾ ಸ್ಥಾನಗಳಿರುವ UPಯ ಚುಕ್ಕಾಣಿ ಹಿಡಿದವರಿಗೆ ದೆಹಲಿಯ ಗದ್ದುಗೆ ಹತ್ತಿರವಾಗುತ್ತದೆ ಎಂಬ ಮಾತು ಪ್ರಚಲಿತದಲ್ಲಿದೆ. ಇದರಿಂದಾಗಿ ರಾಹುಲ್‌ ತಮ್ಮ ದೃಷ್ಟಿಯನ್ನ ಉತ್ತರ ಪ್ರದೇಶದ ಮೇಲೆ ನೆಟ್ಟಿದ್ದು. ಈಗಿನಿಂದಲೆ ಚುನಾವಣಾ ತಯಾರಿ ಆರಂಭಿಸಿದ್ದಾರೆ. ತಮ್ಮ ಸ್ವಕ್ಷೇತ್ರವಾದ ರಾಯ್‌ ಬರೇಲಿಗೆ 2 ದಿನಗಳ ಭೇಟಿ ನೀಡಿರುವ ರಾಹುಲ್‌, ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ಆಡಳಿತವನ್ನ ಟೀಕಿಸಿದ್ದು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಷಾ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಸಭೆ ನಡೆಸಿರುವ ರಾಹುಲ್‌, ಕೆಳ ಹಂತದಿಂದ ಪಕ್ಷವನ್ನ ಸದೃಡಗೊಳಿಸಲು ಸೂಚಿಸಿದ್ದಾರೆ.

ಬಿಜೆಪಿ ವಿರುದ್ದ ಆಡಳಿತ ವಿರೋಧಿ ಅಲೆ...?

ಇದರ ಜೊತೆಗೆ ದೇಶದಲ್ಲಿ ಮತ್ತು ದೇಶದ ಹೊರಗೆ ಒಂದಿಷ್ಟು ಬೆಳವಣಿಗೆಗಳು ನಡೆಯುತ್ತಿವೆ. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ, ಸಿಜೆಐ ಸೂರ್ಯಕಾಂತ್‌ ಅವರು ದೇಶದ ಯುವಕರನ್ನ ಜಿರಳೆಗೆ ಹೋಲಿಸಿ ನೀಡಿದ ಹೇಳಿಕೆಗಳು ದೇಶದ ಯುವಕರನ್ನ ಕುಪಿತಗೊಳಿಸಿದೆ. ಇದರ ಜೊತೆಗೆ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗುತ್ತಿದ್ದು. ಬಿಜೆಪಿ ವಿರುದ್ದ ಆಡಳಿತ ವಿರೋಧಿ ಅಲೆ ಈಗಿನಿಂದಲೇ ರೂಪುಗೊಳ್ಳುತ್ತಿದೆ. ಅಷ್ಟೇ ಅಲ್ಲದೇ ನಾರ್ವೇ ದೇಶದ ಪತ್ರಿಕೆಯೊಂಂದು ಪ್ರಧಾನಿ ಮೋದಿಗೆ ಅವಮಾನಿಸಿದ್ದು. ಇದನ್ನು ರಾಹುಲ್‌ ದೇಶಕ್ಕೆ ಆದ ಅಪಮಾನವೆಂಬಂತೆ ಬಿಂಬಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ವಿಪಕ್ಷಗಳಿಗೆ ಭಾಗ್ಯದ ಬಾಗಿಲನ್ನ ತೆರೆಯುತ್ತಿದೆ. ಆದರೆ ಬಿಜೆಪಿ ವಿರುದ್ದ ಜನಾಂದೋಲನ ರೂಪಿಸಲು ಇಷ್ಟೆಲ್ಲಾ ಅವಕಾಶವಿದ್ದರು ಕೂಡ ವಿಪಕ್ಷಗಳ ನಡುವಿನ ಮುಸುಕಿನ ಗುದ್ದಾಟ ಬಿಜೆಪಿಗೆ ಲಾಭ ಮಾಡಿಕೊಡುವ ಸಾಧ್ಯತೆ ಇದೆ. 

ಮೈತ್ರಿಗೆ ಗುಡ್‌ಬಾಯ್‌ ಹೇಳ್ತಾರ ಅಖಿಲೇಶ್‌...!

ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌, ಸಮಾಜವಾದಿ ಪಕ್ಷದ ಜೊತೆ ಮೈತ್ರಿಯಲ್ಲಿದೆ. ಕಳೆದ ಕಳೆದ ಲೋಕಸಭ ಚುನಾವಣೆಯಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಎರಡು ಪಕ್ಷಗಳು, ಯುಪಿಯಲ್ಲಿ ಬಿಜೆಪಿಯನ್ನ ಬಗ್ಗಿಸುವಲ್ಲಿ ಯಶಸ್ವಿಯಾಗಿದ್ದವು, 2022ರ ವಿಧಾನಸಭ ಚುನಾವಣೆಯಲ್ಲಿ ಕೇವಲ 2 ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಕಳೆದ ಲೋಕಸಭ ಚುನಾವಣೆಯಲ್ಲಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಅತ್ತ ಎಸ್‌ಪಿ ಕೂಡ 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಬಿಜೆಪಿಗೆ ಮಣ್ಣು ಮುಕ್ಕಿಸಿತ್ತು, ಆದರೆ ಇತ್ತೀಚೆಗೆ ನಡೆದಿರುವ ಕೆಲವು ಬೆಳವಣಿಗಳು ಮೈತ್ರಿಯಲ್ಲಿ ಬಿರುಕು ಮೂಡುವಂತೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಿರುದ್ದ ಕಾಂಗ್ರೆಸ್‌ ಮಾಡಿದ ಪ್ರಚಾರ, ಮಮತಾ ಬ್ಯಾನರ್ಜಿ ವಿರುದ್ದ ರಾಹುಲ್‌ ಗಾಂಧಿ ಮಾಡಿದ ಆರೋಪಗಳು ಇಂಡಿಯಾ ಮೈತ್ರಿ ಕೂಟದಲ್ಲಿ ಬಿರುಕು ಮೂಡಿಸಿದೆ. ಅಷ್ಟೇ ಅಲ್ಲದೇ ತಮಿಳುನಾಡಿನಲ್ಲಿ ಅಧಿಕಾರಕ್ಕಾಗಿ ಡಿಎಂಕೆಗೆ ಕೈಕೊಟ್ಟ ಕಾಂಗ್ರೆಸ್‌ ನಡೆ ಬಗ್ಗೆ ಕೂಡ ಅಖಿಲೇಶ್‌ ಬೇಸರಗೊಂಡಿದ್ದಾರೆ. ಪಶ್ಚಿಮ ಬಂಗಾಳ ಫಲಿತಾಂಶದ ಬಳಿಕ ಮಮತಾ ಬ್ಯಾನರ್ಜಿ ಮನೆಗೆ ತೆರಳಿದ್ದ ಅಖಿಲೇಶ್‌ ತಮ್ಮ ಎಕ್ಷ್‌ ಖಾತೆಯಲ್ಲಿ "ಕಷ್ಟದಲ್ಲಿ ಕೈ ಬಿಡದವನೇ ನಿಜವಾದ ಸ್ನೇಹಿತ" ಎಂದು ಪೋಸ್ಟ್‌ ಮಾಡಿದ್ದರು. ಈ ಮೂಲಕ ಕಾಂಗ್ರೆಸ್‌ ಮೈತ್ರಿಗೆ ಅರ್ಹವಲ್ಲ ಎಂದು ಸೂಚ್ಯವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇಂಡಿ ಮೈತ್ರಿ ಕೂಟದಲ್ಲಿ ಅಖಿಲೇಶ್‌ ಉಳಿಯುತ್ತಾರಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಸುತ್ತಿದೆ.

ಮನೆಗೆ ಸೇರಿಸದ ಬಿಎಸ್‌ಪಿ ಅಧಿನಾಯಕಿ ಮಾಯಾವತಿ...!

ರಾಹುಲ್‌ ರಾಯ್‌ಬರೇಲಿಗೆ ಆಗಮಿಸಿದ ದಿನವೇ, ಅಂದರೆ ಮಂಗಳವಾರ (ಮೇ.19) ಸಂಜೆ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಪಾಲ್ ಗೌತಮ್ ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಹಾಗೂ ಸಂಸದ ತನುಜ್ ಪುನಿಯಾ ನೇತೃತ್ವದ ನಾಯಕರ ನಿಯೋಗ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರನ್ನ ಭೇಟಿಯಾಗಲು, ಅವರ ಮನೆಗೆ ತೆರಳಿತ್ತು. ಆದರೆ  ಮುನ್ಸೂಚನೆ ಇಲ್ಲದೆ ದಿಢೀರ್ ಭೇಟಿ ನೀಡಿದ ಕಾಂಗ್ರೆಸ್‌ ನಾಯಕರನ್ನ ಅವರು ಮನೆ ಬಾಗಿಲಿಗೆ ಸೇರಿಸದೆ ಆಚೆ ಕಳಿಸಿದ್ದಾರೆ. ಇದರಿಂದಾಗಿ ಮುಖಭಂಗಕ್ಕೆ ಒಳಗಾಗಿರುವ ಕಾಂಗ್ರೆಸ್‌ ಹೈಕಮಾಂಡ್‌ ಭೇಟಿಗೆ ತೆರಳಿದವರಿಗೆ ನೋಟಿಸ್‌ ನೀಡಿದೆ.

ಅನೇಕ ಸವಾಲುಗಳ ನಡುವೆ ರಾಹುಲ್‌ ಗಾಂಧಿ ಉತ್ತರಪ್ರದೇಶದ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಪ್ರಧಾನಿ ಪಟ್ಟಕ್ಕೇರುವವರ ಮೊದಲ ಮೆಟ್ಟಿಲಾಗಿರುವ ಯುಪಿಯಲ್ಲಿ ರಾಹುಲ್‌ ಕಮಾಲ್‌ ಮಾಡ್ತಾರಾ ಅಥವಾ ಚುನಾವಣೆ ಬರುವ ವೇಳೆಗೆ ರಾಹುಲ್‌ ಮತ್ತೇ ಅದೆ ಹಳೆಚಾಳಿ ಮುಂದುವರಿಸಿ ಸೋಲಿನ ಶತಕ ಬಾರಿಸುತ್ತಾರ ಎಂಬುದನ್ನ ಕಾದು ನೋಡಬೇಕಿದೆ.

ರವಿಕುಮಾರ್‌. ಎನ್‌  ನ್ಯೂಸ್‌ಡೆಸ್ಕ್‌ 

By thebigbulletin.com - 21-05-2026


Ads in Post