ನವದೆಹಲಿ: ಬ್ಯಾಂಕ್ ನೌಕರರ ಸಂಘಟನೆಗಳು ಕರೆ ನೀಡಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಮುಷ್ಕರ ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ಭಾರತೀಯ ಬ್ಯಾಂಕ್ಗಳ ಸಂಘ (IBA) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಡುವೆ ನಡೆದ ಮಹತ್ವದ ಮಾತುಕತೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭಾನುವಾರ ರಾತ್ರಿ 9.30ರ ಸುಮಾರಿಗೆ ನಡೆದ ಸಭೆಯಲ್ಲಿ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ವಿವಿಧ ಬೇಡಿಕೆಗಳು, ಸೇವಾ ಸಂಬಂಧಿತ ಸಮಸ್ಯೆಗಳು ಹಾಗೂ ಬಾಕಿ ಉಳಿದಿರುವ ಹಲವು ವಿಚಾರಗಳ ಕುರಿತು ಎರಡೂ ಕಡೆಯ ಪ್ರತಿನಿಧಿಗಳು ಚರ್ಚೆ ನಡೆಸಿದರು. ಮಾತುಕತೆಯ ಬಳಿಕ ಕೆಲವು ಪ್ರಮುಖ ವಿಷಯಗಳಲ್ಲಿ ಒಮ್ಮತ ಮೂಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಮತ್ತು ಮುಷ್ಕರವನ್ನು ಮುಂದೂಡಲು UFBU ನಿರ್ಧರಿಸಿದೆ.
ಐದು ದಿನಗಳ ಕೆಲಸದ ವಾರದ ಬೇಡಿಕೆ: ಎಲ್ಲ ಶನಿವಾರಗಳನ್ನೂ ಬ್ಯಾಂಕ್ ರಜೆಯನ್ನಾಗಿ ಮಾಡುವ ಬೇಡಿಕೆ ಕುರಿತು IBA ಮತ್ತು UFBU ಒಳಗೊಂಡ ಜಂಟಿ ಸಮಿತಿಯನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಮಿತಿ ವಿವಿಧ ಆಯ್ಕೆಗಳನ್ನು ಪರಿಶೀಲಿಸಿ, ಬ್ಯಾಂಕ್ ಗ್ರಾಹಕರು ಸೇರಿದಂತೆ ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಿದೆ.
2024ರ ಮಾರ್ಚ್ 8ರಂದು ಎಲ್ಲ ಶನಿವಾರಗಳನ್ನೂ ಬ್ಯಾಂಕ್ ರಜೆಯನ್ನಾಗಿ ಮಾಡುವ ಪ್ರಸ್ತಾವಕ್ಕೆ IBA ತಾತ್ವಿಕ ಒಪ್ಪಿಗೆ ನೀಡಿತ್ತು. ಇದರ ಬದಲಾಗಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸುಮಾರು 40 ನಿಮಿಷ ಹೆಚ್ಚುವರಿ ಕೆಲಸ ಮಾಡುವ ಪ್ರಸ್ತಾವವನ್ನೂ ಮುಂದಿಡಲಾಗಿತ್ತು. ಈ ಪ್ರಸ್ತಾವವನ್ನು ಸರ್ಕಾರದ ಅನುಮೋದನೆಗಾಗಿ ಕಳುಹಿಸಿ ಎರಡು ವರ್ಷಕ್ಕೂ ಹೆಚ್ಚು ಸಮಯ ಕಳೆದಿದ್ದರೂ ಅಂತಿಮ ಅನುಮತಿ ದೊರೆತಿಲ್ಲ ಎಂದು ಬ್ಯಾಂಕ್ ನೌಕರರ ಸಂಘಟನೆಗಳು ಹೇಳಿವೆ.
PLI ಯೋಜನೆ ಬದಲಾವಣೆಗೂ ಚರ್ಚೆ: Scale IV ಹಾಗೂ ಅದಕ್ಕಿಂತ ಮೇಲಿನ ಹಂತದ ಬ್ಯಾಂಕ್ ಅಧಿಕಾರಿಗಳಿಗೆ ಅನ್ವಯಿಸುವ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ (PLI) ಯೋಜನೆಯಲ್ಲಿ ಬದಲಾವಣೆ ಮಾಡುವ ಕುರಿತು IBA ಜತೆ ಮಾತುಕತೆ ಆರಂಭಿಸಲು ಸಹ ಒಪ್ಪಿಗೆ ದೊರೆತಿದೆ. ಪ್ರಸ್ತುತ Scale IV ಮತ್ತು ಮೇಲಿನ ಅಧಿಕಾರಿಗಳಿಗೆ ಕಾರ್ಯಕ್ಷಮತೆಯ ಆಧಾರದ ಮೇಲೆ ಗರಿಷ್ಠ 365 ದಿನಗಳ ಮೂಲ ವೇತನದಷ್ಟು ಪ್ರೋತ್ಸಾಹಧನ ಪಡೆಯುವ ಅವಕಾಶವಿದೆ. Scale III ವರೆಗೆ ಇರುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಗರಿಷ್ಠ 15 ದಿನಗಳ ಮೂಲ ವೇತನ ಹಾಗೂ ತುಟ್ಟಿಭತ್ಯೆ (DA) ಆಧಾರಿತ ಪ್ರೋತ್ಸಾಹಧನದ ವ್ಯವಸ್ಥೆಯಿದೆ.
ಈ ವ್ಯತ್ಯಾಸದ ಬಗ್ಗೆ ಬ್ಯಾಂಕ್ ನೌಕರರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರೋತ್ಸಾಹಧನವನ್ನು ವೈಯಕ್ತಿಕ ಕಾರ್ಯಕ್ಷಮತೆಗಿಂತ ಇಡೀ ಬ್ಯಾಂಕ್ನ ಕಾರ್ಯಕ್ಷಮತೆಯನ್ನು ಆಧರಿಸಿ, ಎಲ್ಲರಿಗೂ ಸಮಾನವಾಗಿ ನೀಡಬೇಕು ಎಂಬುದು ಅವುಗಳ ನಿಲುವಾಗಿದೆ. ಇದರ ಜೊತೆಗೆ 2024ರ ಮಾರ್ಚ್ 8ರ ಸಭೆಯ ನಡಾವಳಿಯಲ್ಲಿ ದಾಖಲಾದ ಇತರ ಬಾಕಿ ಬೇಡಿಕೆಗಳು ಮತ್ತು ಸಮಸ್ಯೆಗಳ ಬಗ್ಗೆಯೂ ಮುಂದಿನ ಹಂತದಲ್ಲಿ ಚರ್ಚಿಸಿ ಶೀಘ್ರ ಪರಿಹಾರ ಕಂಡುಕೊಳ್ಳಲು IBA ಮತ್ತು UFBU ಒಪ್ಪಿಕೊಂಡಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದ್ಯಕ್ಕೆ ಮೂರು ದಿನಗಳ ಮುಷ್ಕರ ಸೇರಿದಂತೆ ಯೋಜಿಸಲಾಗಿದ್ದ ಪ್ರತಿಭಟನೆಗಳನ್ನು ಮುಂದೂಡಲಾಗಿದೆ.
ಮುಷ್ಕರ ಮುಂದೂಡಿಕೆಯಿಂದ ದೇಶಾದ್ಯಂತ ಬ್ಯಾಂಕ್ಗಳ ಸಾಮಾನ್ಯ ಸೇವೆಗಳಿಗೆ ಉಂಟಾಗಬಹುದಾಗಿದ್ದ ವ್ಯತ್ಯಯ ತಪ್ಪಿದಂತಾಗಿದೆ. ಮುಂದಿನ ದಿನಗಳಲ್ಲಿ IBA ಮತ್ತು UFBU ನಡುವಿನ ಮಾತುಕತೆಗಳ ಆಧಾರದ ಮೇಲೆ ಐದು ದಿನಗಳ ಕೆಲಸದ ವಾರ ಹಾಗೂ PLI ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.