ಬೆಂಗಳೂರು: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿಲುವು ಪ್ರಕಟಿಸಿದೆ. ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
ಬೈಕ್ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡು ಪ್ರಯಾಣಿಕರನ್ನು ಸಾಗಿಸುವುದರಿಂದ ರಸ್ತೆ ಸುರಕ್ಷತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ ಎಂದು ಸರ್ಕಾರ ತನ್ನ ನಿಲುವಿನಲ್ಲಿ ತಿಳಿಸಿದೆ. ಪ್ರಯಾಣಿಕರ ಸುರಕ್ಷತೆ, ವಿಮಾ ರಕ್ಷಣೆ ಹಾಗೂ ನಿಯಮಾವಳಿಗಳ ಬಗ್ಗೆಯೂ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿ ಸೇವೆಗೆ ಬಳಸುವುದರಿಂದ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಎದುರಾಗುತ್ತವೆ ಎಂದು ರಾಜ್ಯ ಸರ್ಕಾರ ಹೇಳಿದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪ್ರಯಾಣಿಕರಿಗೆ ದೊರೆಯುವ ವಿಮಾ ರಕ್ಷಣೆ ಸೇರಿದಂತೆ ಹಲವು ಅಂಶಗಳನ್ನು ಸರ್ಕಾರ ಪ್ರಸ್ತಾಪಿಸಿದೆ.
ಇದೇ ವೇಳೆ, ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ನಿಯಮಾವಳಿ ಅಥವಾ ಪ್ರತ್ಯೇಕ ವರ್ಗೀಕರಣ ಇಲ್ಲ ಎಂಬುದನ್ನೂ ರಾಜ್ಯ ಸರ್ಕಾರ ತನ್ನ ಅಫಿಡವಿಟ್ನಲ್ಲಿ ಉಲ್ಲೇಖಿಸಿದೆ. ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದ ಕರ್ನಾಟಕ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಇದೀಗ ಸರ್ಕಾರದ ಅಫಿಡವಿಟ್ನಿಂದಾಗಿ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಇದರ ನಡುವೆಯೇ ಬೆಂಗಳೂರಿನಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಬೈಕ್ ಟ್ಯಾಕ್ಸಿ ಸೇವೆಗೆ ಬಳಸುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಯುತ್ತದೆಯೇ ಅಥವಾ ನಿಯಂತ್ರಣಕ್ಕೆ ಒಳಪಡುತ್ತದೆಯೇ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.