ನವದೆಹಲಿ: ಪಶ್ಚಿಮ ಬಂಗಾಳದ TMC ಪಾರ್ಟಿಯಲ್ಲಿ ಭೂಕಂಪ ಸಂಭವಿಸಿದ್ದು, 28 ಸಂಸದರ ಪೈಕಿ 20 ಸಂಸದರು ಬಿಜೆಪಿ ಸೇರ್ಪಡೆಯಾಗಲು ಸಿದ್ದರಾಗಿದ್ದಾರೆ ಎಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯ ನಂತರ ಟಿಎಂಸಿ ಶಾಸಕಾಂಗ ಪಕ್ಷದಲ್ಲಿ ವಿಭಜನೆಯಾಗಿತ್ತು. ಇದೀಗ ಸಂಸದೀಯ ಪಕ್ಷದಲ್ಲಿ ವಿಭಜನೆ ಬಹುತೇಕ ಖಚಿತವಾಗಿದೆ.
ಬಂಡಾಯವೆದ್ದಿರುವ ತೃಣಮೂಲ ಕಾಂಗ್ರೆಸ್ (TMC) ಸಂಸದರು ಕೇಂದ್ರ ಸಚಿವ ಮತ್ತು ಪಕ್ಷದ ವೀಕ್ಷಕ ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ಹಾಜರಿದ್ದರು. ಸಭೆಯ ನಂತರ, ಹಿರಿಯ ಡಿಎಂಸಿ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ 20 ಟಿಎಂಸಿ ಸಂಸದರು ಸಹಿ ಮಾಡಿದ ಪತ್ರವನ್ನು ಸಲ್ಲಿಸಿದ್ದು. ಲೋಕಸಭೆಯಲ್ಲಿ ಪ್ರತ್ಯೇಕ ಬಣವನ್ನು ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಣ ಎನ್ಡಿಎ ಸೇರಲು ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.
ಒಂದೆಡೆ, ಮಮತಾ ಬ್ಯಾನರ್ಜಿ ಇಂಡಿಯ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದ್ದರು. ಮತ್ತೊಂದೆಡೆ, ಬಂಡಾಯ ಸಂಸದರು ಪ್ರತ್ಯೇಕ ಬಣವನ್ನು ರಚಿಸುವ ಉದ್ದೇಶವನ್ನು ಘೋಷಿಸಿ ಸ್ಪೀಕರ್ಗೆ ಪತ್ರಗಳನ್ನು ಸಲ್ಲಿಸಿದರು. ಅವರು ಟಿಎಂಸಿ ಸಂಸದೀಯ ಪಕ್ಷದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ. ಇಂದು ಮಧ್ಯಾಹ್ನ 12.53ಕ್ಕೆ ಪತ್ರವನ್ನು ಸಲ್ಲಿಸಲಾಯಿತು.
ವಿಧಾನಸಭಾ ಚುನಾವಣೆಯ ನಂತರ, ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷವು ವಿಭಜನೆಯಾಗಿದೆ. ರಿತಬ್ರತಾ ಬ್ಯಾನರ್ಜಿ ನೇತೃತ್ವದ 58 ಶಾಸಕರು, ಪ್ರತ್ಯೇಕ ಬಣವನ್ನು ರಚಿಸಿರುವುದಾಗಿ ಹೇಳಿಕೊಂಡು ವಿಧಾನಸಭಾ ಸ್ಪೀಕರ್ಗೆ ಪತ್ರ ಬರೆದಿದ್ದಾರೆ. ಸ್ಪೀಕರ್ ಅದನ್ನು ಅನುಮೋದಿಸಿದ್ದಾರೆ. ಶಾಸಕರ ನಡುವಿನ ವಿಭಜನೆಯ ನಂತರ ಈಗ ಟಿಎಂಸಿ ಸಂಸದರ ನಡುವಿನ ವಿಭಜನೆ ಬಹುತೇಕ ಖಚಿತವಾಗಿದೆ. ಇದು ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗಿದೆ.