ಲಖನೌ: ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿಯನ್ನ ಮುಂದುವರಿಸಿದ್ದಾರೆ. ಪ್ರಪಂಚದೆಲ್ಲಡೆ ಜನರು ಕಡಿಮೆ ಬೆಲೆಗೆ ತೈಲ ಕೊಳ್ಳುತ್ತಿದ್ದಾರೆ, ಅದರೆ ಭಾರತದಲ್ಲಿ ಮಾತ್ರ ಜನರಿಗೆ ಅಂತಹ ಅವಕಾಶ ಸಿಗುತ್ತಿಲ್ಲ. ಬಿಜೆಪಿಯವರು ಹಣಕ್ಕಾಗಿ ಧರ್ಮವನ್ನ ಬಳಸಿಕೊಳ್ಳುತ್ತಿದ್ದಾರೆ, ಯಾರ್ಯಾರು ಬಿಜೆಪಿಯನ್ನ ಬೆಂಬಲಿಸುತ್ತಾರೋ ಅವರೆಲ್ಲ ಭಗವಾನ್ ರಾಮನಿಗೆ ದ್ರೋಹ ಬಗೆದಂತೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲು ನಿರಾಕರಿಸುವ ಮೂಲಕ ಮೋದಿ ಸರ್ಕಾರ ಜನರ ಹಿತಾಸಕ್ತಿಗಿಂತ ತೈಲ ಕಂಪನಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಅಲ್ಲದೆ ಬಿಜೆಪಿಯ "ಧರ್ಮ ಮತ್ತು ಹಣದ ರಾಜಕೀಯ ಈಗ ಕೊನೆಗೊಂಡಿದೆ" ಎಂದು ವಾಗ್ದಾಳಿ ನಡೆಸಿದರು.
"ವಿಶ್ವಾದ್ಯಂತ ಕಚ್ಚಾ ತೈಲ ಬೆಲೆಗಳು ಕುಸಿದಿದ್ದು, ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ತೀವ್ರ ಕುಸಿದವಾಗಿದೆ. ಇತರ ದೇಶಗಳಲ್ಲಿನ ಸಾರ್ವಜನಿಕರು ಈ ಕಡಿಮೆ ಬೆಲೆಗೆ ತೈಲ ಪಡೆಯುತ್ತಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ, ಬಿಜೆಪಿ ಸರ್ಕಾರ ಬೆಲೆಗಳನ್ನು ಕಡಿಮೆ ಮಾಡುತ್ತಿಲ್ಲ; ಬದಲಾಗಿ, ಅದು ನಿರಂತರವಾಗಿ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ. ಬಿಜೆಪಿ ಸರ್ಕಾರವು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿಲ್ಲ. ಕಂಪನಿಗಳಿಗಾಗಿ ಕೆಲಸ ಮಾಡುತ್ತಿದೆ" ಎಂದು ಯಾದವ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
BJP ಬೆಂಬಲಿಸುವವರು ರಾಮನಿಗೆ ದ್ರೋಹ ಬಗೆದಂತೆ
ಇನ್ನು ಅಯೋಧ್ಯೆಯ ರಾಮ ಮಂದಿರ ದೇಣಿಗೆ ಹಗರಣದ ಬಗ್ಗೆಯೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ಪಕ್ಷದ ಮುಗ್ಧ ಬೆಂಬಲಿಗರು ಕೇಸರಿ ಪಕ್ಷ ಧರ್ಮಕ್ಕಾಗಿ ಹೋರಾಡುತ್ತಿದೆ ಎಂದುಕೊಂಡಿದ್ದಾರೆ. ಆದರೆ ಬಿಜೆಪಿ ಹಣಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿಯ "ಧರ್ಮದ ರಾಜಕೀಯ" ಈಗ ಕೊನೆಗೊಂಡಿದ್ದು, "ಹಣದ ರಾಜಕೀಯ"ದ ಮೇಲೆ ಮಾತ್ರ ಗಮನಹರಿಸುತ್ತಿದೆ. ಈಗಿದ್ದರು ಬಿಜೆಪಿಯನ್ನು ಬೆಂಬಲಿಸುವವರು ಭಗವಾನ್ ರಾಮನಿಗೆ ದ್ರೋಹ ಮಾಡುತ್ತಿದ್ದಾರೆ ಎಂಬ ಅಖಿಲೇಶ್ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.