ಬೆಂಗಳೂರು : ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನ ಹೈಕಮಾಂಡ್ ಆಯ್ಕೆ ಮಾಡಿದ್ದು, ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (B.K Hariprasad) ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹೈಕಮಾಂಡ್ ಈ ನಿರ್ಧಾರದಿಂದ ಸತೀಶ್ ಜಾರಕಿಹೊಳಿಗೆ ಬಾರಿ ನಿರಾಸೆಯಾಗಿದೆ.
ಡಿಕೆ ಶಿವಕುಮಾರ್ ಸಿಎಂ ಆಗಿ ಆಯ್ಕೆಯಾದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ ಆರಂಭವಾಗಿತ್ತು. ಸಚಿವ ಸತೀಶ್ ಜಾರಕಿಹೊಳಿ ಪಕ್ಷದ ಅಧ್ಯಕ್ಷಗಿರಿಯನ್ನ ತಮಗೆ ನೀಡಬೇಕು ಎಂಬ ಬೇಡಿಕೆಯನ್ನ ಹೈಕಮಾಂಡ್ ಮುಂದೆ ಇಟ್ಟಿದ್ದರು, ಆದರೆ ಜಾರಕಿಹೊಳಿ ಕೆಪಿಸಿಸಿ ಜೊತೆಗೆ ಮಂತ್ರಿ ಸ್ಥಾನಕ್ಕೂ ಬೇಡಿಕೆ ಇಟ್ಟಿದ್ದರಿಂದ ಹೈಕಮಾಂಡ್ ನಾಯಕರು ಇದಕ್ಕೆ ಒಪ್ಪಿರಲಿಲ್ಲ, ಯಾವುದಾದರೂ ಒಂದನ್ನ ಆಯ್ಕೆ ಮಾಡಿಕೊಳ್ಳುವಂತೆ ಜಾರಕಿಹೊಳಿಗೆ ಸೂಚಿಸಿದ್ದರು ಎಂಬ ಮಾಹಿತಿಗಳು ಹರಿದಾಡಿದ್ದವು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸತೀಶ್ ಜಾರಕಿಹೊಳಿ " ತನಗೆ ಪಕ್ಷ ಯಾವ ಜವಾಬ್ದಾರಿ ಕೊಡುತ್ತೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅಧಿಕೃತವಾಗಿ ಮಾಹಿತಿ ಬರುವವರೆಗೂ ಕಾಯೋಣ. ಹೈಕಮಾಂಡ್ ಹೇಳಿದ್ದನ್ನ ನಾನೂ ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳಬೇಕು. ನನ್ನ ಬಗ್ಗೆ ಅಪಪ್ರಚಾರ ಮಾಡಿದವರ ಬಗ್ಗೆ ಪೊಲೀಸ್ ತನಿಖೆ ಆಗ್ತಿದೆ. ನಿಜಾಂಶ ಹೊರ ಬರುತ್ತೆ ಎಂದು ಹೇಳಿದ್ದರು.
ಹರಿಪ್ರಸಾದ್‌ಗೆ ಕೆಪಿಸಿಸಿ ಅಧ್ಯಕ್ಷಗಿರಿ..!
ಇಂದು ಬೆಳಿಗ್ಗೆಯೆ ಕೆಪಿಸಿಸಿ ಅಧ್ಯಕ್ಷರ ಹುದ್ದೆ ವಹಿಸಿಕೊಳ್ಳುವಂತೆ ಹೈಕಮಾಂಡ್ ನಾಯಕರಿಂದ ಬಿ.ಕೆ. ಹರಿಪ್ರಸಾದ್‌ಗೆ ಫೋನ್ ಬಂದಿದ್ದು, ಹರಿಪ್ರಸಾದ್‌ಗೆ ಎಂಎಲ್‌ಸಿ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾಗಿ ತಿಳಿಸಿದ್ದರು. ಈಗಾಗಲೇ ಪರಿಷತ್ ಚುನಾವಣೆಗೆ ಹರಿಪ್ರಸಾದ್ ಹೆಸರನ್ನ ಘೋಷಿಸಿದ್ದು, ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. 2028ರ ಚುನಾವಣೆಗೆ ಹರಿಪ್ರಸಾದ್ ಯಾವ ರಣತಂತ್ರ ರೂಪಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.