Search


ಜಿಂಪ್‌ಲೈನ್‌ ರೈಡಿಂಗ್‌ ವೇಳೆ ಕೆಳಗೆ ಬಿದ್ದು ಬಾಲಕ ಸಾವು; ಪೋಷಕರ ಎದುರಲ್ಲೇ ನಡೆಯಿತು ದುರಂತ

ಆಗ್ರಾ: ಜಿಪ್‌ಲೈನಿಂಗ್ ಸವಾರಿಯ ವೇಳೆ ಬಾಲಕನೊಬ್ಬ ಎತ್ತರದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಕುರಿತಾದ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.

ಮನರಂಜನೆಯ ಜೊತೆಗೆ ಸಾಹಸದ ಆಟಗಳಲ್ಲಿ ಜಿಂಪ್‌ ಲೈನಿಂಗ್‌ ಸವಾರಿಯು ಕೂಡ ಒಂದು. ಆದರೆ ಈ ಆಟ 15 ವರ್ಷದ ಬಾಲಕನ ಪಾಲಿಗೆ ಮುಳುವಾಗಿದೆ.  ಹದಿಹರೆಯದ ಬಾಲಕನೊಬ್ಬ ತನ್ನ ಪೋಷಕರೊಂದಿಗೆ ಆಗ್ರಾ ಚೌಪಟ್ಟಿಗೆ ಭೇಟಿ ನೀಡಿದ್ದ. ಅಲ್ಲಿ ಅತ್ಯಂತ ಉತ್ಸಾಹದಿಂದ ಜಿಪ್‌ಲೈನಿಂಗ್ ಸಾಹಸಕೆಕಂದು ಹೊರಟಿದ್ದ. ಆದರೆ, ತಾಂತ್ರಿಕ ದೋಷ ಅಥವಾ ಸುರಕ್ಷತಾ ಲೋಪ ಸಂಭವಿಸಿದೆ. ಪರಿಣಾಮವಾಗಿ, ಆತ ಗಾಳಿಯಲ್ಲೇ ನಿಯಂತ್ರಣ ಕಳೆದುಕೊಂಡು ನೇರವಾಗಿ ಕೆಳಗೆ ಬಿದ್ದಿದ್ದಾನೆ.

ಅಲ್ಲಿಯೇ ಇದ್ದ ಪ್ರತ್ಯಕ್ಷದರ್ಶಿಯೊಬ್ಬರು ಈ ಇಡೀ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, ಬಾಲಕನ ಪೋಷಕರು ಸ್ಥಳದಲ್ಲೇ ಇದ್ದು, ಅವರ ಕಣ್ಣೆದುರೇ ಮಗ ನರಳುತ್ತಾ ಪ್ರಾಣ ಬಿಟ್ಟಿದ್ದಾನೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ನಿರ್ಲಕ್ಷ್ಯದ ಆರೋಪದ ಮೇಲೆ ಜಿಪ್‌ಲೈನಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಕಂಪನಿಯ ಮ್ಯಾನೇಜರ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಜೊತೆಗೆ ಕಂಪನಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.

By thebigbulletin.com - 26-05-2026


Ads in Post