ನವದೆಹಲಿ: ಕಾವೇರಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ಕರ್ನಾಟಕಕ್ಜೆ ಶಾಕ್ ಕೊಟ್ಟಿದೆ, ಕೂಡಲೇ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ್ದ ಆದೇಶವನ್ನ ಪಾಲಿಸುವಂತೆ ಸುಪ್ರೀಂ ಕರ್ನಾಟಕಕ್ಕೆ ಸೂಚಿಸಿದೆ. ಈ ಮೂಲಕ CWMA ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಲಾಗಿದ್ದ ನಿರ್ದೇಶನವನ್ನ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಮೂಲಕ ಬರಗಾಲದಿಂದ ಬಳಲುತ್ತಿರುವ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ,
CWMA ಕರ್ನಾಟಕದಿಂದ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬರುತ್ತಿಲ್ಲ ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ. ನಿತ್ಯ ಕೇವಲ 5ರಿಂದ 6 ಸಾವಿರ ಕ್ಯೂಸೆಕ್‌ನಷ್ಟು ನೀರು ಬರುತ್ತಿದ್ದು, ಈವರೆಗೆ ಸುಮಾರು 13ರಿಂದ 14 ಟಿಎಂಸಿ ನೀರು ಮಾತ್ರ ಲಭಿಸಿದೆ ಎಂದು ತಮಿಳುನಾಡು ತನ್ನ ವಾದದಲ್ಲಿ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ʻಈಗಾಗಲೇ 3,500 ಕ್ಯೂಸೆಕ್ ನೀರು ಹರಿಸಲಾಗಿದೆ. CWMA ಆದೇಶವನ್ನು ಪಾಲಿಸಲು ರಾಜ್ಯ ಪ್ರಯತ್ನಿಸುತ್ತಿದೆ ಎಂದು ವಾದಿಸಲಾಗಿದೆ. ಬಿಳಿಗುಂಡ್ಲು ಬಳಿ ನೀರಿನ ಪ್ರಮಾಣವನ್ನು ಅಳೆಯಲಾಗುತ್ತದೆ. 12 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಅಲ್ಲಿ ದಾಖಲಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಕರ್ನಾಟಕದ ಪರ ವಾದ ಮಂಡಿಸಲಾಗಿದೆ. ಜೊತೆಗೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪರಿಸ್ಥಿತಿ ಅನಿಶ್ಚಿತವಾಗಿದ್ದು, ಈ ಪ್ರಮಾಣದಲ್ಲಿ ನಿರಂತರವಾಗಿ ನೀರು ಹರಿಸುವುದು ರಾಜ್ಯಕ್ಕೆ ಕಷ್ಟವಾಗುತ್ತಿದೆ. ಆದರೂ CWMA ಆದೇಶ ಪಾಲಿಸಲು ಕರ್ನಾಟಕ ಪ್ರಯತ್ನಿಸುತ್ತಿದೆ ಎಂದು ತಿಳಿಸಲಾಗಿದೆ.
ಎರಡು ವಾದಗಳನ್ನ ಆಲಿಸಿರುವ ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ. ಇದರ ನಡುವೆ ಒಂದರ ನಂತರ ಮತ್ತೊಂದರಂತೆ ಬರೆ ಬೀಳುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ರಾಜ್ಯದ ರೈತರು ಹೇಗೆ ಪ್ರತಿಕ್ರಿಯೆ ನೀಡಲಿದೆ ಎನ್ನುವುದು ಕಾದು ನೋಡಬೇಕಿದೆ.