ಬೆಂಗಳೂರು: ಚಾಮರಾಜನಗರ ನಡೆದಿರುವ ಎನ್ಕೌಂಟರ್ ಕುರಿತು ವಿಧಾನ ಪರಿಷತ್ನಲ್ಲಿ ಭಾರೀ ಚರ್ಚೆ ನಡೆದಿದೆ.ಈ ಕುರಿತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸದನದಲ್ಲಿ ಪ್ರಸ್ತಾಪಿಸಿದ್ದು. ಚಾಮರಾಜನಗರದಲ್ಲಿ ನಡೆದಿರುವುದು ಅಮಾನವೀಯ ಘಟನೆ, ಈ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕಲಾಪ ಪ್ರಾರಂಭ ಆಗುತ್ತಲೇ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಿಷಯ ಪ್ರಸ್ತಾಪಿಸಿದರು. "ಚಾಮರಾಜನಗರದಲ್ಲಿ ಅಮಾನವೀಯ ಘಟನೆ ನಡೆದಿದೆ. 3 ಜನರ ಎನ್ಕೌಂಟರ್ ಆಗಿದ್ದು, ನೇರವಾಗಿ ಗುಂಡಿಟ್ಟು ಕೊಲ್ಲಲಾಗಿದೆ. ಇದಕ್ಕೆ ಸರ್ಕಾರ ಹೇಳಿಕೆ ಕೊಡಬೇಕು. ತಹಶೀಲ್ದಾರ್ ತನಿಖೆ ಬೇಡ. ನ್ಯಾಯಾಂಗ ತನಿಖೆ ಆಗಬೇಕು. ಸರ್ಕಾರ ಉತ್ತರ ಕೊಡಬೇಕು ಎಂದು ಆಗ್ರಹದಸಿದರು. ಇದೇ ವೇಳೆ ವಿಪಕ್ಷದ ಸದಸ್ಯರು ಧ್ವನಿಗೂಡಿಸಿದರು.
ಆಡಳಿತ ಪಕ್ಷದ ಸದಸ್ಯರು ಪ್ರಶ್ನೋತ್ತರ ಕಲಾಪ ನಡೆಸುವಂತೆ ಪಟ್ಟು ಹಿಡಿದರು. ಸಭಾಪತಿಗಳು ಕೂಡ ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಮಾಡಿಕೊಡಿ ಅಂದರೂ ಕೇಳದ ಸದನದಲ್ಲಿ ಗದ್ದಲ ಗಲಾಟೆ ನಡೆಯಿತು. ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಿಬೇಕು, ಮೃತ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ, ಸರ್ಕಾರಿ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದರು. ಈ ವೇಳೆ ವಿಪಕ್ಷ-ಆಡಳಿತ ಪಕ್ಷಗಳ ನಡುವೆ ಗದ್ದಲ, ಗಲಾಟೆ ಜೋರಾಯಿತು. ಗಲಾಟೆ ಜೋರಾದ ಹಿನ್ನೆಲೆ ಕಲಾಪವನ್ನು ಸಭಾಪತಿಗಳು 10 ನಿಮಿಷ ಮುಂದೂಡಿಕೆ ಮಾಡಿದರು. ಬಳಿಕ ಕಲಾಪ ಪ್ರಾರಂಭವಾಗಿ ಅರಣ್ಯ ಸಚಿವರಿಂದ ಉತ್ತರ ಕೊಡಿಸುವ ಭರವಸೆಯನ್ನು ಸಭಾಪತಿ, ಸಭಾ ನಾಯಕರು ನೀಡಿದರು. ವಿಪಕ್ಷಗಳು ಸಮಾಧಾನಗೊಂಡರು.