Search


ಪ್ರೆಸ್‌ಕ್ಲಬ್‌ನಲ್ಲಿ ʻಹರ ಹರ ಮೋದಿʼ ಎಂದು ಭಜನೆ; ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಯ್ತು ವಿಡಿಯೋ

ನವದೆಹಲಿ: ಪ್ರಧಾನಿ ಮೋದಿ ನಾಮಸ್ಮರಣೆ ಮಾಡುತ್ತ ಭಜನೆ ಮಾಡಿರುವ ಘಟನೆ ದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಶ್ರೀರಾಮನ ಅವತಾರದಲ್ಲಿ ನಿಂತಿರುವ ಪೋಸ್ಟರ್‌ ಮುಂದೆ ಈ ರೀತಿಯ ಕಾರ್ಯಕ್ರಮ ಆಯೋಜಿಸಿದ್ದು. ಇದೀಗ ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿವೆ.

ದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ ನಡೆದಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (PM Modi) ಅವರು ಬಿಲ್ಲು-ಬಾಣ ಹಿಡಿದು ಶ್ರೀರಾಮನ ಅವತಾರದಲ್ಲಿ ನಿಂತಿರುವಂತಹ ಪೋಸ್ಟರ್‌ವೊಂದರ ಮುಂದೆ ಕೆಲವರು ಆರತಿ ನೆರವೇರಿಸುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಭಾಗವಹಿಸಿದ್ದವರು ʻಜೈ ಜೈ ಮೋದಿ, ಹರ ಹರ ಮೋದಿʼ ಎಂದು ಘೋಷಣೆ ಕೂಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಇನ್ನು ಈ ದೃಷ್ಯಗಳು ವೈರಲ್‌ ಆದ ಬೆನ್ನಲ್ಲೇ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದ್ದು, ʻಈ ಕಾರ್ಯಕ್ರಮವನ್ನು ಕ್ಲಬ್ ಆಯೋಜಿಸಿರಲಿಲ್ಲ. ಪತ್ರಿಕಾಗೋಷ್ಠಿ ನಡೆಸುವ ಉದ್ದೇಶಕ್ಕಾಗಿ ಸಂಸ್ಥೆಯೊಂದಕ್ಕೆ ಸಭಾಂಗಣವನ್ನು ಬಾಡಿಗೆಗೆ ನೀಡಲಾಗಿತ್ತು ಎಂದು ಹೇಳಿದೆ. ಆದ್ರೆ ಸಭಾಂಗಣ ಬಾಡಿಗೆಗೆ ನೀಡುವ ಸಂದರ್ಭದಲ್ಲಿ ನಿಗದಿಪಡಿಸಿದ್ದ ನಿಯಮಗಳನ್ನು ಆಯೋಜಕರು ಉಲ್ಲಂಘಿಸಿದ್ದಾರೆ ಎಂದು ಪ್ರೆಸ್ ಕ್ಲಬ್ ತಿಳಿಸಿದೆ. ಈ ಉಲ್ಲಂಘನೆ ಗಮನಕ್ಕೆ ಬಂದ ತಕ್ಷಣ ಕ್ಲಬ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಕಾರ್ಯಕ್ರಮವನ್ನ ನಿಲ್ಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಜೊತೆಗೆ ಕಾರ್ಯಕ್ರಮದ ಕುರಿತಾದ ವಿಡಿಯೋಗಳು ಮತ್ತು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಪ್ರೆಸ್‌ಕ್ಲಬ್‌ ಗಮನಕ್ಕೂ ಬಂದಿದೆ ಎಂದು ಸ್ಪಷ್ಟಪಡಿಸಲಾಗಿದೆ. ಹಾಗೂ ಈ ಸಭಾಂಗಣದ ನಿಯಮಗಳನ್ನ ಉಲ್ಲಂಘಿಸಲಾಗಿದೆ ಎಂದು ಕಾರ್ಯಕ್ರಮವನ್ನ ಅರ್ಧಕ್ಕೆ ತಡೆಹಿಡಿಯಲಾಗಿದೆ ಎಂದು ಪ್ರೆಸ್‌ ಕ್ಲಬ್‌ ತನ್ನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

By Ravikumar - 20-08-2026


Ads in Post