ಬೆಂಗಳೂರು: ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ, ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ವಿಪಕ್ಷಗಳ ನಿಲುವಿನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 'ಮತಗಳ್ಳತನ'ದ ಮೂಲಕ ಪ್ರಧಾನಿಯಾಗಿದ್ದಾರೆ ಎಂಬ CJP ಆರೋಪವನ್ನು ಚೇತನ್ ಅಹಿಂಸಾ ಟೀಕಿಸಿದ್ದಾರೆ. ಯಾವುದೇ ಆಧಾರವಿಲ್ಲದೆ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಇಂತಹ ಆರೋಪಗಳು ಮನುವಾದಿಗಳು ಮತ್ತು SIR ವಿರೋಧಿಗಳ ವಾದಗಳಿಗೆ ಮತ್ತೊಂದು ಉದಾಹರಣೆಯಾಗಿವೆ ಎಂದು ಹೇಳಿದ್ದಾರೆ. ಒಂದು ವೇಳೆ ಮತಗಳ್ಳತನ ನಡೆದಿದ್ದರೆ, ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿ ಹಾಗೂ ತಮಿಳುನಾಡಿನ TVK ಮುಖ್ಯಮಂತ್ರಿ ಕೂಡ ಮತಗಳ್ಳರೇ ಎಂದು ಪ್ರಶ್ನಿಸುವ ಮೂಲಕ, ಚುನಾವಣಾ ಫಲಿತಾಂಶಗಳ ಕುರಿತು ನಡೆಯುತ್ತಿರುವ ಆರೋಪಗಳ ವಿಶ್ವಾಸಾರ್ಹತೆಯನ್ನು ಚೇತನ್ ಪ್ರಶ್ನಿಸಿದ್ದಾರೆ.
'ನಿಮ್ಮ ಕೈಯಲ್ಲಿ ಸುತ್ತಿಗೆ ಮಾತ್ರ ಇದ್ದರೆ, ಎಲ್ಲವೂ ಮೊಳೆಯಂತೆ ಕಾಣುತ್ತದೆ. ಅದೇ ರೀತಿ, ಮನಸ್ಸಿನಲ್ಲಿ ಬಿಜೆಪಿಯನ್ನು ವಿರೋಧಿಸುವ ಒಂದೇ ಆಲೋಚನೆ ಇದ್ದರೆ, ಪ್ರತಿಯೊಂದೂ ಪಿತೂರಿಯಂತೆ ಕಾಣುತ್ತದೆ. ನಿಮ್ಮ ರಾಜಕೀಯ ಅಜೆಂಡಾಗೆ ಹೊಂದಿಕೆಯಾಗದ ಪ್ರತಿಯೊಂದು ಚುನಾವಣಾ ಫಲಿತಾಂಶವೂ ಮತಗಳ್ಳತನ ಎನಿಸುತ್ತದೆ' ಎಂದು ಅವರು ತಮ್ಮ ಪೋಸ್ಟ್ನಲ್ಲಿ ಟೀಕಿಸಿದ್ದಾರೆ.
ಇದೇ ವೇಳೆ, CJP ವಿರುದ್ಧವೂ ಕಿಡಿಕಾರಿರುವ ಚೇತನ್, 'ಮತ್ತೊಂದು ಕಾಕ್ರೋಚ್ ಸುಳ್ಳೇ? ಬಹುಶಃ ಹೌದು. ಎಂದಿನಂತೆ ಕಾಕ್ರೋಚ್ನ ಅಜ್ಞಾನವೇ? ಖಂಡಿತ' ಎಂದು ವ್ಯಂಗ್ಯವಾಡಿದ್ದಾರೆ. ಚುನಾವಣಾ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ದೇಶದಲ್ಲಿ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲಿ ಅವರ ಈ ಹೇಳಿಕೆ ಗಮನ ಸೆಳೆದಿದೆ.