Search


ಡಿ-ಬಾಸ್ ವಿರುದ್ಧ ಸಾಕ್ಷಿ ಹೇಳುವಾಗ ಚಿಕ್ಕಣ್ಣ ಗಾಬರಿ; ಬುಧವಾರಕ್ಕೆ ವಿಚಾರಣೆ ಮುಂದೂಡಿದ ಜಡ್ಜ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಟರಾದ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಅವರ ಸಾಕ್ಷ್ಯಗಳು ನ್ಯಾಯಾಲಯದ ಗಮನ ಸೆಳೆದಿವೆ. 2024ರ ಜೂನ್ 8ರಂದು ಬೆಂಗಳೂರಿನ ಆರ್‌ಆರ್ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಟ ದರ್ಶನ್ ಅವರೊಂದಿಗೆ ನಡೆದಿದ್ದ ಪಾರ್ಟಿಯಲ್ಲಿ ಇಬ್ಬರೂ ಭಾಗವಹಿಸಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಇಬ್ಬರನ್ನು ಪ್ರಕರಣದ ಪ್ರಮುಖ ಸಾಕ್ಷಿಗಳೆಂದು ಪರಿಗಣಿಸಲಾಗಿದೆ. ಮಂಗಳವಾರ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಲು ಹಾಜರಾದ ನಟ ಚಿಕ್ಕಣ್ಣ ಆತಂಕದಿಂದಾಗಿ ಹೇಳಿಕೆ ದಾಖಲಿಸಲು ಪರದಾಡಿದರೆ, ಮತ್ತೊಬ್ಬ ಸಾಕ್ಷಿ ಯಶಸ್ ಸೂರ್ಯ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಸರ್ಕಾರಿ ಅಭಿಯೋಜಕರು ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ಕೋರ್ಟ್‌ನಲ್ಲಿ ಆತಂಕಗೊಂಡ ನಟ ಚಿಕ್ಕಣ್ಣ

ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಸಾಕ್ಷ್ಯ ನುಡಿಯಲು ಮುಂದಾದ ನಟ ಚಿಕ್ಕಣ್ಣ ತೀವ್ರ ಆತಂಕಕ್ಕೆ ಒಳಗಾದರು. ಅವರು ಮಾತನಾಡಲು ತಡಬಡಿಸುತ್ತಿರುವುದನ್ನು ಗಮನಿಸಿದ ನ್ಯಾಯಾಧೀಶರು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಸೂಚಿಸಿದರು. ಆದರೆ, ತಮಗೆ ತೀವ್ರ ಒತ್ತಡವಾಗುತ್ತಿದೆ ಎಂದು ಹೇಳಿದ ಚಿಕ್ಕಣ್ಣ, ಸಂಪೂರ್ಣ ಹೇಳಿಕೆ ದಾಖಲಿಸಲು ಹಿಂದೇಟು ಹಾಕಿದರು. ಈ ಹಿನ್ನೆಲೆಯಲ್ಲಿ ಅವರ ಮಾನಸಿಕ ಒತ್ತಡ ಮತ್ತು ಆತಂಕದ ಪರಿಸ್ಥಿತಿಯನ್ನು ಪರಿಗಣಿಸಿದ ನ್ಯಾಯಾಲಯವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ದರ್ಶನ್ ಜೊತೆಗಿನ ಪಾರ್ಟಿ ಬಗ್ಗೆ ಯಶಸ್ ಸೂರ್ಯ ಹೇಳಿದ್ದೇನು?

ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದ ನಟ ಯಶಸ್ ಸೂರ್ಯ, ನಟ ದರ್ಶನ್ ಅವರೊಂದಿಗೆ ಹಲವು ವರ್ಷಗಳಿಂದ ಪರಿಚಯವಿದ್ದು, 2010ರಲ್ಲಿ ಬಿಡುಗಡೆಯಾದ 'ಚಿಂಗಾರಿ' ಸಿನಿಮಾದಿಂದ ಆರಂಭಿಸಿ 'ಕುರುಕ್ಷೇತ್ರ', 'ಚಕ್ರವರ್ತಿ', 'ಒಡೆಯ' ಮತ್ತು 'ಗರಡಿ' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ. ಘಟನೆ ನಡೆದ ದಿನ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಮುಂಬರುವ ಸಿನಿಮಾದ ಕುರಿತು ಚರ್ಚಿಸಲು ದರ್ಶನ್ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ಊಟ ಮಾಡುತ್ತಾ ಸಿನಿಮಾ ವಿಚಾರಗಳ ಬಗ್ಗೆ ಮಾತ್ರ ಮಾತನಾಡಿದ್ದೆವು. ಊಟ ಮುಗಿದ ಬಳಿಕ ಅಲ್ಲಿಂದ ಹೊರಟುಹೋದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

By Ravikumar - 13-10-2026


Ads in Post