ಬೆಂಗಳೂರು: ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದ, ಧರ್ಮಸ್ಥಳ ಗ್ರಾಮದ ಬುರುಡೆ (Dharmasthala Case) ಕೇಸ್ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಚಿನ್ನಯ್ಯ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದಾನೆ, ಈ ಅರ್ಜಿಯಲ್ಲಿ ಷಡ್ಯಂತ್ರಗಾರರಾದ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಮಾಡಿದ ಷಡ್ಯಂತ್ರವನ್ನ ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದು, ಅವರು ನೀಡಿದ ಕಿರುಕುಳದ ಬಗ್ಗೆಯೂ ನ್ಯಾಯಾಲಯದ ಮುಂದೆ ವಿವರಿಸಿದ್ದಾನೆ.
ತನ್ನನ್ನು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಚಿನ್ನಯ್ಯ (Chinnayya) ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ SIT ತನಿಖೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾನೆ. ಷಡ್ಯಂತ್ರದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಸೇರಿದಂತೆ ಹಲವರ ಪಾತ್ರದ ಬಗ್ಗೆ ಉಲ್ಲೇಖಿಸಲಾಗಿದೆ. ನಟ ಪ್ರಕಾಶ್ ರಾಜ್ (Prakash Raj) ಬಗ್ಗೆಯೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ರಿಟ್ ಅರ್ಜಿಯಲ್ಲೇನಿದೆ?
ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಷಡ್ಯಂತ್ರಗಾರರು ಹೇಗೆ ತನ್ನನ್ನ ಬಳಸಿಕೊಂಡರು ಎಂಬುದನ್ನ ವಿವರಿಸಿದ್ದಾನೆ ‘ವಿಠಲ್ ಗೌಡ ತಮ್ಮನ್ನು ಮಹೇಶ್ ಶೆಟ್ಟಿ ತಿಮರೋಡಿಗೆ ಪರಿಚಯಿಸಿದರು. ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ದಫನ್ ಮಾಡಲಾಗಿದೆ. ಅಲ್ಲಿ ಸಾವಿರಾರು ಶವಗಳಿವೆ ಎಂದು ಹೇಳಲು ನಿರ್ದೇಶಿಸಿದರು. ನಂತರ ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ, ಗಣೇಶ್ ಮತ್ತಿತರರು ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಕರೆದೊಯ್ದರು. ಆಗಿಂದಾಗ್ಗೆ 5 ಸಾವಿರ, 15 ಸಾವಿರ ಹಣ ನೀಡುತ್ತಿದ್ದರು.
ʻನಂತರ ಬೆಂಗಳೂರಿನ ಜಯಂತ್ ಮನೆಗೆ ಕರೆದೊಯ್ದು ತಲೆ ಬುರುಡೆ ಕೊಟ್ಟು ಕೈಯಲ್ಲಿ ಹಿಡಿದುಕೊಳ್ಳುವಂತೆ ಸೂಚಿಸಿ ಫೋಟೋ ತೆಗೆದುಕೊಂಡರು. ನಂತರ ವಕೀಲರ ಕಚೇರಿಗೆ ಕರೆದೊಯ್ದು ಅಲ್ಲಿ ಸಹಿ ಪಡೆದರು. ನಂತರ ಸುಜಾತಾ ಭಟ್ ಅವರೊಂದಿಗೆ ಗಿರೀಶ್ ಮಟ್ಟಣ್ಣನವರ್ ತಮ್ಮನ್ನೂ ದೆಹಲಿಗೆ ಸುಪ್ರೀಂಕೋರ್ಟ್ಗೆ ಕರೆದೊಯ್ದರು. ನಂತರ ಉಜಿರೆಗೆ ತೆರಳಿದಾಗ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ಕೂಡಿ ಹಾಕಲಾಗಿತ್ತು.
ಮಸಾಜ್ ಮಾಡು ಎಂದು ಕಿರುಕುಳ..!
ಮಹೇಶ್ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಅನುಭವಿಸಿದ ಕಿರುಕುಳದ ಬಗ್ಗೆಯೂ ರಿಟ್ ಅರ್ಜಿಯಲ್ಲಿ ವಿವರಿಸಿದ್ದು " ಸಂಜೆ ವೇಳೆ ಗಿರೀಶ್ ಮಟ್ಟಣ್ಣನವರ್ ಅವರ ತಲೆ, ಕಾಲುಗಳನ್ನು ಮಸಾಜ್ ಮಾಡಲು, ಮಹೇಶ್ ಶೆಟ್ಟಿ ತಿಮರೋಡಿ ಅವರಿಗೂ ಮಸಾಜ್ ಮಾಡಲು ಒತ್ತಾಯಿಸಲಾಗುತ್ತಿತ್ತು. ಅವರ ಕೃಷಿ ಭೂಮಿಯಲ್ಲಿ ಕೆಲಸ ಮಾಡಿಸುತ್ತಿದ್ದರು. ವಕೀಲರು ಹೇಳಿದಂತೆ ಕೋರ್ಟ್ಗೆ ಹೇಳದಿದ್ದರೆ ಕೊಂದು ಅದೇ ಜಾಗದಲ್ಲಿ ಹೂಳುವುದಾಗಿ ಬೆದರಿಸಿದ್ದರು. ಸಮೀರ್ ಎಂ.ಡಿ. ಅಜಯ್ ಅವರ ಯೂಟ್ಯೂಬ್ ಚಾನಲ್ಗಳಲ್ಲಿ ಅವರ ಸೂಚನೆಯಂತೆ ಹೇಳಿಸಿ ರೆಕಾರ್ಡ್ ಮಾಡಿಸಲಾಯಿತು. ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಚೆಕ್ ನೀಡುವುದಾಗಿ ಭರವಸೆ ನೀಡಿದ್ದರು’ ಎಂದು ಚಿನ್ನಯ್ಯನ ರಿಟ್ ಅರ್ಜಿಯಲ್ಲಿ ಉಲ್ಲೇಖವಾಗಿದೆ.