Search


ಗಾನಕೋಗಿಲೆ ಎಸ್ ಜಾನಕಿ ಅವರ ನಿಧನಕ್ಕೆ ಸಿಎಂ ಡಿ.ಕೆ‌ ಶಿವಕುಮಾರ್ ತೀವ್ರ ಸಂತಾಪ

ಬೆಂಗಳೂರು: ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಎಲ್ಲರ ಮನಗೆದ್ದ ಗಾನಕೋಗಿಲೆ ಎಸ್ ಜಾನಕಿ ಅವರ ನಿಧ‌ನಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಭಾರತೀಯ ಚಿತ್ರರಂಗದ ಅಪ್ರತಿಮ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಖ್ಯಾತಿಯ ಬಹುಭಾಷಾ ಗಾಯಕಿ ಶ್ರೀಮತಿ ಎಸ್. ಜಾನಕಿ ಅವರ ನಿಧನದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಕನ್ನಡ ಭಾಷೆ ಇರುವ ತನಕ ಎಸ್ ಜಾನಕಿ ಅವರ ಹಾಡುಗಳು ಅಜರಾಮರ. ಅವರ ದನಿಯಲ್ಲಿ ಕನ್ನಡ ಹಾಡುಗಳನ್ನು ಕೇಳಿ ಬೆಳೆದವರು ನಾವು. ಕನ್ನಡದ ಸೊಬಗಿಗೆ ಮಾಧುರ್ಯ ತುಂಬಿದವರು ಅವರು" ಎಂದು ಸಿಎಂ ಅವರು ಸ್ಮರಿಸಿದ್ದಾರೆ. 

"ಸರಳತೆಯ ಸಾಕಾರಮೂರ್ತಿ ಜಾನಕಮ್ಮನವರ ಅಪ್ರತಿಮ ಕಂಠಸಿರಿ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಂದೆಂದಿಗೂ ಅಮರ. ಅವರು ಮೂಲತಃ ಆಂಧ್ರಪ್ರದೇಶದವರಾದರೂ ಕನ್ನಡದ ಮೇಲಿನ‌ ಅಭಿಮಾನಕ್ಕೆ ಮೈಸೂರಿನಲ್ಲಿ ನೆಲೆಸಿದ್ದರು. 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಹೆಗ್ಗಳಿಕೆ ಇವರದು.ಜಾನಕಮ್ಮನವರ ನಿಧನದಿಂದ ಸಂಗೀತ ಕ್ಷೇತ್ರದ ಮಹಾನ್ ಸ್ವರಮಾಧುರ್ಯ ಮೌನವಾದಂತಾಗಿದೆ" ಎಂದು ನೋವು ವ್ಯಕ್ತಪಡಿಸಿದ್ದಾರೆ.

ಪದ್ಮ ಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳ ಪ್ರಶಸ್ತಿ ಇವರ ಮುಡಿಗೇರಿದ್ದವು. ಜಾನಕಮ್ಮನವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

By Ravikumar - 12-07-2026


Ads in Post