ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್(Joseph Vijay) ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ (Kollur Mookambika Temple ಭೇಟಿ ನೀಡಿದ್ದಾರೆ. ದೇವಿಯ ದರ್ಶನ ಪಡೆದ ವಿಜಯ್, ತಾಯಿ ಮೂಕಾಂಭಿಕೆಗೆ 1.6 ಕೆಜಿ ತೂಕದ ಬೆಳ್ಳಿ ಖಡ್ಗವನ್ನ ದೇವಿಗೆ ಅರ್ಪಿಸಿದ್ದಾರೆ.
ದೇವಸ್ಥಾನಕ್ಕೆ ಆಗಮಿಸಿದ ವಿಜಯ್ ಅವರಿಗೆ ಹೂಗುಚ್ಛ ನೀಡಿ ಆಡಳಿತ ಮಂಡಳಿಯ ಟ್ರಸ್ಟಿಗಳು ಸ್ವಾಗತ ಕೋರಿದರು. ಮಂತ್ರಘೋಷದೊಂದಿಗೆ ಕ್ಷೇತ್ರದೊಳಗೆ ಅರ್ಚಕ ವೃಂದ ಬರಮಾಡಿಕೊಂಡಿತು. ಶಲ್ಯ ಧರಿಸಿ ಆಗಮಿಸುವ ಮೂಲಕ ಸಿಎಂ ವಿಜಯ್ ದೇವಸ್ಥಾನದ ಶಿಷ್ಟಾಚಾರ ಪಾಲನೆ ಮಾಡಿದರು. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಸಂಕಲ್ಪ ಪೂಜೆ ನೆರವೇರಿಸಲಾಯಿತು. ಸಿಎಂ ವಿಜಯ್ ಸಂಕಲ್ಪ ಪೂಜೆ ಮಾಡಿದರು.
ಶಕ್ತಿ ದೇವಿಗೆ ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿ ವಿಜಯ್ ಸುಮಾರು ಅರ್ಧ ಗಂಟೆಗಳ ಕಾಲ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತಾಯಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನ ಕಾಣಿಕೆಯಾಗಿ ಅರ್ಪಿಸಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಬಾಬು ಹೆಗಡೆ ತಿಳಿಸಿದ್ದಾರೆ. ನಂತರ ಅರ್ಚಕರು ವಿಜಯ್ ಅವರ ಕೈಯಯಿಗೆ ರಕ್ಷಾ ದಾರವನ್ನ ಕಟ್ಟಿದ್ದು, ವಿಜಯ್ ಅವರ ಎಲ್ಲಾ ವಿಧಿವಿಧಾನಗಳನ್ನ ಮುಗಿಸಿ ದೇವಸ್ಥಾನದಿಂದ ಹೊರಟರು.
ಇನ್ನು ವಿಜಯ್‌ಗೂ ಮೊದಲು ತಮಿಳುನಾಡಿನ ಅನೇಕ ರಾಜಕೀಯ ಗಣ್ಯರು ಕೊಲ್ಲೂರಿಗೆ ಆಗಮಿಸಿದ್ದು, ತಮಿಳುನಾಡಿನ ಜನಪ್ರಿಯ ಮುಖ್ಯಮಂತ್ರಿ ಎಂಜಿಆರ್ ಅವರು ದೇವಿಗೆ ಚಿನ್ನದ ಖಡ್ಗವನ್ನ ಅರ್ಪಿಸಿದ್ದರು, ಜೊತೆಗೆ ಮಾಜಿ ಸಿಎಂ ಜಯಲಲಿತಾ ಅವರು ಕೂಡ ಮೂಕಾಂಬಿಕೆ ದರ್ಶನಕ್ಕೆ ಆಗಮಿಸುತ್ತಿದ್ದರು.