ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಬುಧವಾರ ಚೆನ್ನೈ ಮೆಟ್ರೋ ರೈಲಿನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸಿ ಸಾರ್ವಜನಿಕರ ಗಮನ ಸೆಳೆದರು. ಒಮಂಡುರಾರ್ ಮೆಟ್ರೋ ನಿಲ್ದಾಣದಲ್ಲಿ ಸ್ವತಃ ಟಿಕೆಟ್ ಖರೀದಿಸಿದ ಅವರು, ನಂದನಂ ಮೆಟ್ರೋ ನಿಲ್ದಾಣದವರೆಗೆ ಸಂಚರಿಸಿ ಮೆಟ್ರೋ ಸೇವೆ ಹಾಗೂ ಹಂತ-2 ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ಪ್ರಯಾಣದ ವೇಳೆ ಮೆಟ್ರೋ ರೈಲಿನಲ್ಲಿದ್ದ ಪ್ರಯಾಣಿಕರೊಂದಿಗೆ ಆತ್ಮೀಯವಾಗಿ ಮಾತನಾಡಿದ ವಿಜಯ್, ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಹಲವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಯಾವುದೇ ವಿಶೇಷ ಪ್ರೋಟೋಕಾಲ್ ಇಲ್ಲದೆ ಜನರೊಂದಿಗೆ ಬೆರೆತು ಮಾತನಾಡಿದ ಮುಖ್ಯಮಂತ್ರಿಯ ಸರಳ ನಡೆ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಯಿತು.
ಮೆಟ್ರೋ ಮುಖ್ಯ ಕಚೇರಿಗೆ ಭೇಟಿ ನೀಡಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹಂತ-2 ಯೋಜನೆಯ ವಿವಿಧ ಮಾರ್ಗಗಳ ಕಾಮಗಾರಿ, ಡ್ರೈವರ್ಲೆಸ್ ರೈಲುಗಳ ಕಾರ್ಯಾಚರಣೆ ಹಾಗೂ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಯ ಮೆಟ್ರೋ ಪ್ರಯಾಣದ ವಿಡಿಯೊ ಹಾಗೂ ಸಾರ್ವಜನಿಕರೊಂದಿಗೆ ನಡೆಸಿದ ಸಂವಾದದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "ಸಾಮಾನ್ಯ ಜನರ ಮುಖ್ಯಮಂತ್ರಿ" ಎಂದು ಅನೇಕರು ಪ್ರಶಂಸಿಸಿದ್ದಾರೆ. ಸಾರ್ವಜನಿಕರೊಂದಿಗೆ ನೇರವಾಗಿ ಬೆರೆತು ಅವರ ಅಭಿಪ್ರಾಯಗಳನ್ನು ಆಲಿಸಿದ ವಿಜಯ್ ಅವರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.