ನವದೆಹಲಿ : ಡಿಜಿಟಲ್ನಲ್ಲಿ ಹೊಸ ಟ್ರಂಡ್ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಮೊದಲ ಬಾರಿಗೆ ಮಾಧ್ಯಮ ಸುದ್ದಿಗೋಷ್ಟಿ ನಡೆಸಿದೆ, ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷವು ತನ್ನ ಹೊಸ ಸಂವಹನ ಸಮಿತಿಯನ್ನು ರಚಿಸಿದ್ದು, ಪ್ರತಿಭಾವಂತ ಯುವ ನಾಯಕರಿಗೆ ಜವಾಬ್ದಾರಿ ನೀಡಿದೆ. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು, ದೇಶದ ಯುವಕರ ಭವಿಷ್ಯವನ್ನ ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಹೋರಾಡುತ್ತೇವೆ ಎಂದು ಕಾಕ್ರೋಚ್ ಪಾರ್ಟಿ ಘೋಷಣೆ ಮಾಡಿದೆ.
ಕಾಕ್ರೋಚ್ ಪಾರ್ಟಿಯ ಪ್ರಮುಖ ವಕ್ತಾರರಾಗಿ 3 ಯುವಕರನ್ನ ನೇಮಿಸಿದ್ದು, ಸೌರವ್ ದಾಸ್: ತನಿಖಾ ಪತ್ರಕರ್ತರಾದ ಇವರು ರಾಷ್ಟ್ರೀಯ ವಕ್ತಾರರಾಗಿ ನೇತೃತ್ವ ವಹಿಸಲಿದ್ದಾರೆ. ವಿಜೇತಾ ದಹಿಯಾ: ಪ್ರಸಿದ್ಧ ರಾಜಕೀಯ ವಿದ್ವಾಂಸೆ ಹಾಗೂ ಚಲನಚಿತ್ರ ನಿರ್ಮಾಪಕಿ. ಅಶುತೋಷ್ ರಂಕಾ: ಕಾರ್ಪೊರೇಟ್ ವಲಯದ ಮಾಜಿ ನಿರ್ವಹಣಾ ತಜ್ಞ ಇವರು ಕಾಕ್ರೋಚ್ ಪಾರ್ಟಿಯ ವಕ್ತಾರರಾಗಿ ನೇಮಕಗೊಂಡಿದ್ದಾರೆ.
ಇನ್ನು ಕಾಕ್ರೋಚ್ ಪಾರ್ಟಿ ತಮ್ಮ ಬೇಡಿಕೆಯನ್ನ ಸರ್ಕಾರದ ಮುಂದಿಟ್ಟಿದ್ದು NEET, SSC GD ಮತ್ತು CBSE ಪರೀಕ್ಷೆಗಳಲ್ಲಿ ವರದಿಯಾಗಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳಿಗೆ ಸಾಂಸ್ಥಿಕ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಪಕ್ಷವು ಒತ್ತಾಯಿಸಿದೆ. ಜೊತೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಹಮ್ಮಿಕೊಂಡಿದ್ದ ಆನ್ಲೈನ್ ಅರ್ಜಿಗೆ ಈಗಾಗಲೇ 800,000 ಕ್ಕೂ ಹೆಚ್ಚು ನಾಗರಿಕರು ಬೆಂಬಲ ಸೂಚಿಸಿದ್ದಾರೆ. ಇಬ್ಬರು ಅಧಿಕಾರಿಗಳ ವರ್ಗಾವಣೆಗಿಂತಲೂ, ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಸಿಜೆಪಿ ವಕ್ತಾರರು ಪ್ರತಿಪಾದಿಸಿದ್ದಾರೆ.
ದೆಹಲಿಯಲ್ಲಿ ಬೃಹತ್ ಪ್ರತಿಭಟನೆ...!
ಇದೇ ಶನಿವಾರ ( ಜೂನ್ 6) ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಘೋಷಿಸಿದ್ದು, ಸಿಜೆಪಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ, ಪ್ರತಿಭಟನ ತಂಡವು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ, ಪ್ರತಿಭಟನೆಗೆ ಗೊತ್ತುಪಡಿಸಲಾದ ಅಧಿಕೃತ ಸ್ಥಳವಾದ ‘ಜಂತರ್ ಮಂತರ್’ನಲ್ಲಿ ಶಾಂತಿಯುತ ಧರಣಿ ನಡೆಸಲು ಅನುಮತಿ ಕೋರಿದೆ. ಯಾವುದೇ ನಿರ್ದಿಷ್ಟ ರಾಜಕೀಯ ಬ್ಯಾನರ್ ಇಲ್ಲದೆ, ದೇಶದ ಯುವಜನತೆ ಮತ್ತು ಎಲ್ಲಾ ಸಂಘಟನೆಗಳು ಕಟ್ಟುನಿಟ್ಟಾಗಿ ಕಾನೂನಿನ ಮಿತಿಯೊಳಗೆ ಈ ಶಾಂತಿಯುತ ಜಾಗೃತಿಯಲ್ಲಿ ಭಾಗವಹಿಸಬೇಕಾಗಿ ಸಿಜೆಪಿ ಮುಕ್ತ ಆಹ್ವಾನ ನೀಡಿದೆ.