ಕೊಪ್ಪಳ: ಇಸ್ಲಾಂ ಶ್ರೇಷ್ಠ ಎಂದು ಕರೆದು ವಿವಾದ ಸೃಷ್ಟಿಸಿರುವ ಸಚಿವ ಬಸವರಾಜ್ ರಾಯರೆಡ್ಡಿ ಅವರ ವಿರುದ್ಧ ಬಿಜೆಪಿಯವರು ವಾಗ್ದಾಳಿ ನಡೆಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು ʻನನ್ನ ಜೊತೆ ಹಿಂದೂ ಧರ್ಮದ ಬಗ್ಗೆ ಚರ್ಚೆ ಮಾಡೋಕೆ ಯಾರು ತಯಾರಿದ್ದೀರೋ ಬನ್ನಿ ಎಂದು ಸವಾಲು ಹಾಕಿದ್ದಾರೆ.
ನಿನ್ನೆ(ಸೆ.01) ತಡರಾತ್ರಿ ಕೊಪ್ಪಳ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು . ʻಜಗತ್ತಿನಲ್ಲಿ ಇಸ್ಲಾಂ (Islam) ಅತ್ಯಂತ ಶ್ರೇಷ್ಠ ಹಾಗೂ ವೈಜ್ಞಾನಿಕವಾದ ಧರ್ಮವಾಗಿದ್ದು, ನನಗೆ ಮಕ್ಕಾ-ಮದೀನಾದ ಹಜ್ (Hajj) ಯಾತ್ರೆಗೆ ಹೋಗುವ ತೀವ್ರ ಆಸೆಯಿದೆʼ ಎನ್ನುವ ತಮ್ಮದೇ ಹೇಳಿಕೆಗೆ ವ್ಯಕ್ತವಾದ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಶಿವಕುಮಾರ್ ಅವರು ನನ್ನ ಹೇಳಿಕೆ ಬಗ್ಗೆ ಏನೂ ಮಾತಾಡಿಲ್ಲ, ʻಏನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗ್ತಿದ್ಯಲ್ಲಾ ಅಂತಷ್ಟೇ ಅಂದ್ರುʼ. ನನ್ನ ಬಳಿ ಆ ಹೇಳಿಕೆ ಕುರಿತು ಏನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ರು.
ಮುಂದುವರಿದು ಮಾತನಾಡಿದ ಸಚಿವರು ʻನಾನು ಯಾವುದೇ ಧರ್ಮವನ್ನ ತೆಗಳಿ ಮಾತನಾಡಿಲ್ಲ, ಇಸ್ಲಾಂ ಧರ್ಮದ ಕಾರ್ಯಕ್ರಮಕ್ಕೆ ಹೋದಾಗ ನಾನು ಅವರನ್ನ ಬೈಯೋಕೆ ಆಗುತ್ತಾ ? ಆ ರೀತಿ ಮಾಡಿದ್ರೆ ಅದು ಸ್ಟುಪಿಡ್ ಆಗುತ್ತೆ ಎಂದು ಟೀಕೆಕಾರರಿಗೆ ಸಚಿವ ಬಸವರಾಜ್ ರಾಯರೆಡ್ಡಿ ತಿರುಗೇಟು ನೀಡಿದರು, ಜೊತೆಗೆ ಹಿಂದೂ ಧರ್ಮದ ಬಗ್ಗೆ ಚರ್ಚೆ ಮಾಡಲು ತಯಾರಿರುವವರು ಬನ್ನಿ ಎಂದು ಸವಾಲು ಎಸೆದರು. ನಾನು ಉಪನಿಷತ್ ಮಾತಾಡ್ತೀನಿ, ಯಾರಾದ್ರೂ ಇದ್ರೆ ಬರಲಿ ಎಂದ ರಾಯರೆಡ್ಡಿ, ಪ್ರತಾಪ್ ಸಿಂಹ ಅಂದ ತಕ್ಷಣ ಯಾರಿದಾರೆ ಬರಲಿ ಎಂದು ಸಿಡಿಮಿಡಿಗೊಂಡರು. ನಾನು ಯಾವ ಧರ್ಮವನ್ನೂ ಬೈದಿಲ್ಲ, ಬೈಯೋದು ಇಲ್ಲ, ಧರ್ಮದ ಬಗ್ಗೆ ಅವರಿಗಿಂತ ನನಗೆ ಚೆನ್ನಾಗಿ ಗೊತ್ತು ಎಂದು ಕಿಡಿ ಕಾರಿದ್ರು.