Search


ಕಾಮನ್‌ವೆಲ್ತ್ ಗೇಮ್ಸ್ 2026: ರಿಷಿಕಾಂತಾ ಸಿಂಗ್‌ಗೆ ಬೆಳ್ಳಿ, ಭಾರತದ ಪದಕ ಬೇಟೆಗೆ ಬಲ

ಭಾರತದ ವೇಟ್‌ಲಿಫ್ಟರ್ ಚನಂಬಂ ರಿಷಿಕಾಂತಾ ಸಿಂಗ್ ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಪುರುಷರ 60 ಕೆಜಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಈ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಬೆಳ್ಳಿ ಪದಕವಾಗಿದೆ. ರಿಷಿಕಾಂತಾ ಅವರು ಸ್ನ್ಯಾಚ್‌ನಲ್ಲಿ 121 ಕೆಜಿ ಎತ್ತಿ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು. ಬಳಿಕ ಕ್ಲೀನ್ ಅಂಡ್ ಜರ್ಕ್‌ನಲ್ಲಿ 143 ಕೆಜಿ ಎತ್ತಿ ಒಟ್ಟು 264 ಕೆಜಿ ಭಾರ ಎತ್ತುವ ಮೂಲಕ ದ್ವಿತೀಯ ಸ್ಥಾನ ಪಡೆದರು. 

ಮಲೇಷ್ಯಾದ ಮೊಹಮ್ಮದ್ ಅನಿಕ್ ಬಿನ್ ಕಾಸ್ದಾನ್ ಒಟ್ಟು 273 ಕೆಜಿ ಎತ್ತಿ ಚಿನ್ನದ ಪದಕ ಗೆದ್ದರೆ, ಕೀನ್ಯಾದ ಜೋಶುವಾ ಅಮುಂಗಾ ಮ್ಬೊಯಾ 260 ಕೆಜಿಯೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಮಣಿಪುರ ಮೂಲದ 28 ವರ್ಷದ ರಿಷಿಕಾಂತಾ ಸಿಂಗ್, ಭಾರತದ ಪ್ರಮುಖ ವೇಟ್‌ಲಿಫ್ಟರ್‌ಗಳಲ್ಲಿ ಒಬ್ಬರಾಗಿದ್ದು, ಈ ಹಿಂದೆ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾರೆ. ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರ ಈ ಸಾಧನೆ ಭಾರತದ ಪದಕ ಬೇಟೆಗೆ ಮಹತ್ವದ ಉತ್ತೇಜನ ನೀಡಿದೆ. 

By Ravikumar - 26-07-2026


Ads in Post