ರಾಮನಗರ: ಬಿಜೆಪಿಯವರನ್ನು ‘ರಣಹದ್ದುಗಳು’ ಎಂದು ಹೋಲಿಸಿ ಹೇಳಿಕೆ ನೀಡಿದ್ದ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ಸಲ್ಲಿಸಲಾಗಿದೆ.
ಟಿ. ನರಸೀಪುರದಲ್ಲಿ ನಡೆದ ಗಲಭೆ ವಿಚಾರವಾಗಿ ಬಿಜೆಪಿ ನಾಯಕರು ಮಾಡಿದ್ದ ಆರೋಪಗಳಿಗೆ ಪ್ರತಿಕ್ರಿಯಿಸುವ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರನ್ನು ರಣಹದ್ದುಗಳಿಗೆ ಹೋಲಿಸಿದ್ದರು. ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ ಅವರು ಸಚಿವರ ವಿರುದ್ಧ ದೂರು ನೀಡಿದ್ದಾರೆ.
ರಾಜಕೀಯ ಟೀಕೆಯ ಸಂದರ್ಭದಲ್ಲಿ ರಣಹದ್ದುಗಳ ಬಗ್ಗೆ ತಪ್ಪು ಮಾಹಿತಿ ಮತ್ತು ಸಂದೇಶವನ್ನು ಹರಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ರಣಹದ್ದುಗಳನ್ನು ಕ್ರೂರ ಹಾಗೂ ಗಲಭೆ ಸೃಷ್ಟಿಸುವ ಪಕ್ಷಿಗಳಂತೆ ಬಿಂಬಿಸುವ ಮೂಲಕ ವನ್ಯಜೀವಿ ಪ್ರೇಮಿಗಳು ಮತ್ತು ಪರಿಸರಾಸಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ನಿಯಮಗಳನ್ನು ಉಲ್ಲಂಘಿಸಿರುವ ಆರೋಪವೂ ದೂರಿನಲ್ಲಿ ಮಾಡಲಾಗಿದೆ. ಅಳಿವಿನಂಚಿನಲ್ಲಿರುವ ರಣಹದ್ದುಗಳ ಕುರಿತು ತಪ್ಪು ಸಂದೇಶ ರವಾನಿಸಿದ ಆರೋಪದ ಹಿನ್ನೆಲೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.